ಕೊಡಗು: ತಾಯಿಯ ಪ್ರಿಯಕರನ ಹೊಡೆತದಿಂದ ಎರಡು ವರ್ಷದ ಮಗು ಮೃತಪಟ್ಟ ಘಟನೆ ಗೋಣಿಕೊಪ್ಪ ಶ್ರೀಮಂಗಲ ಸಮೀಪದ ಕಾಕೂರು ಕಾಲೋನಿಯಲ್ಲಿ ನಡೆದಿದೆ.
ಬೂದಿತಿಟ್ಟು ಮೂಲದ ಸುಬ್ರಮಣಿ ಮತ್ತು ಗೀತಾ ದಂಪತಿಯ ಎರಡು ವರ್ಷದ ಪುತ್ರ ಮಣಿ ಮೃತಪಟ್ಟ ಮಗು ಎಂದು ಹೇಳಲಾಗಿದೆ. 7 ವರ್ಷದ ಹಿಂದೆ ಸುಬ್ರಮಣಿ ದಂಪತಿಗೆ ಮದುವೆಯಾಗಿದ್ದು, ಆರು ತಿಂಗಳ ಹಿಂದೆ ವೆಸ್ಟ್ ನೆಮ್ಮಲೆ ಗ್ರಾಮದ ಲೈನ್ ಮನೆಗೆ ಕೆಲಸಕ್ಕೆ ಬಂದಿದ್ದರು. ಮೂರು ತಿಂಗಳ ಹಿಂದೆ ದಂಪತಿ ನಡುವೆ ಜಗಳವಾಗಿ ಸುಬ್ರಮಣಿ 6 ವರ್ಷದ ಮಗಳೊಂದಿಗೆ ಮನೆ ಬಿಟ್ಟುಹೋಗಿದ್ದ. ಎರಡು ವರ್ಷದ ಗಂಡು ಮಗುವಿನೊಂದಿಗೆ ಗೀತಾ ಕಾಕೂರು ಗ್ರಾಮದ ರವಿ ಜೊತೆಗೆ ಅಲ್ಲೇ ವಾಸವಾಗಿದ್ದಾಳೆ.
ಸೋಮವಾರ ರಾತ್ರಿ ಜಗಳವಾಗಿ ಮಗುವಿನ ಎದೆಗೆ ರವಿ ಬಲವಾಗಿ ಹೊಡೆದಿದ್ದಾನೆ. ಗೀತಾ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರ ಅಸ್ವಸ್ಥರಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಪ್ರಕರಣ ದಾಖಲಿಸಿಕೊಂಡ ಶ್ರೀಮಂಗಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.