ಕಲಬುರಗಿ: ಒಂದು ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಸೇರಿದಂತೆ ಇಬ್ಬರಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿದೆ.
ಲಂಚ ಸ್ವೀಕರಿಸಿದ ಆರೋಪ ಸಾಬೀತದ ಹಿನ್ನೆಲೆಯಲ್ಲಿ ತಹಶೀಲ್ದಾರರಾಗಿದ್ದ ಶಶಿಕಲಾ ಪಾದಗಟ್ಟಿ, ಶಿವಾನಂದ ಜಮಖಂಡಿ ಅವರಿಗೆ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿದೆ.
ಕರಜಗಿ ನಾಡಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ ಆಗಿದ್ದ ಶಿವಲಿಂಗಯ್ಯ ಬಸಯ್ಯ ಮಠ ವಿರುದ್ಧ ಲಂಚ ಪಡೆದ ದೂರುಗಳು ಬಂದಿದ್ದವು. ತಮ್ಮ ವಿರುದ್ಧದ ಅರ್ಜಿ ಬಗೆಹರಿಸಲು ಸಹಾಯ ಮಾಡುವಂತೆ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರನ್ನು ಶಿವಲಿಂಗಯ್ಯ ಕೋರಿದ್ದರು. ಇದಕ್ಕೆ ಒಂದು ಲಕ್ಷ ರೂ. ಲಂಚ ನೀಡುವಂತೆ ತಹಶೀಲ್ದಾರ್ ಬೇಡಿಕೆ ಇಟ್ಟಿದ್ದರು. ಲಂಚ ನೀಡದಿದ್ದರೆ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಬೇರೆಯವರನ್ನು ನೇಮಕ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಶಿವಲಿಂಗಯ್ಯ 2017ರ ಆಗಸ್ಟ್ 31 ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದರು. ಶಶಿಕಲಾ ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಜ್ಯ ಸರ್ಕಾರ ಅವರಿಗೆ ಕಳೆದ ವಾರ ಕಡ್ಡಾಯ ನಿವೃತ್ತಿಗೆ ಸೂಚಿಸಿ ಕೆಲಸದಿಂದ ಬಿಡುಗಡೆ ಮಾಡಿತ್ತು.

