ಕರ್ನಾಟಕದ ನಾಯಕತ್ವ ಬದಲಾವಣೆ ಹೈಕಮಾಂಡ್ ನಾಯಕರು ಬ್ರೇಕ್ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೆಹಲಿಯಿಂದ ಅಭಯ ಸಿಕ್ಕಿದ್ದು, ಅವರು ಬಜೆಟ್ ಮಂಡನೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳತ್ತ ಗಮನ ಹರಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 3 ದಿನಗಳ ದೆಹಲಿ ಭೇಟಿ ಬಳಿಕ ಕರ್ನಾಟಕ ರಾಜಕೀಯದಲ್ಲಿ ಕೇಳಿ ಬರುತ್ತಿರುವ ಸುದ್ದಿ ಇದು.
ಅಸ್ಸಾಂ ವಿಧಾನಸಭೆ ಚುನಾವಣೆ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ಸಭೆಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಮೂರು ದಿನ ದೆಹಲಿಯಲ್ಲಿಯೇ ಇದ್ದರು. ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಲು ಅವರು ಬಯಸಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ ಎಂಬ ಸುದ್ದಿ ಈಗ ಬಂದಿದೆ.
ಸಿದ್ದರಾಮಯ್ಯ ಪರಮಾಪ್ತ ಸಚಿವರಾದ ಇಬ್ಬರು ಸಿದ್ದರಾಮಯ್ಯ ಪರವಾಗಿ ಈ ವಿಚಾರದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದಾರೆ. ಒಬ್ಬರು ಸಚಿವರು ದೆಹಲಿಗೆ, ಮತ್ತೊಬ್ಬ ಸಚಿವರು ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಕಾರಣಕ್ಕೆ ಡಿ.ಕೆ.ಶಿವಕುಮಾರ್ ದೆಹಲಿ ಯಾತ್ರೆ ‘ದಂಡ’ಯಾತ್ರೆಯಾಗಿದೆ.
ರಾಹುಲ್ ಗಾಂಧಿ ಭೇಟಿ: ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ್ದ ಸಿದ್ದರಾಮಯ್ಯ, “ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಶಾಸಕರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಈ ವಿಚಾರದಲ್ಲಿ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಬೇಕು” ಎಂದು ಹೇಳಿದ್ದರು.
“ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ನಮ್ಮ ಪಕ್ಷದ ಶಾಸಕರಿಗಿಂತ ಮಾಧ್ಯಮಗಳು ಹೆಚ್ಚು ಆಸಕ್ತಿ ತೋರುತ್ತಿವೆ” ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದರು.
ಆದರೆ ಡಿ.ಕೆ.ಶಿವಕುಮಾರ್ ಬಣದಿಂದ Come to Delhi ಎಂಬ ಸಂದೇಶ ಬಂದಿದೆ ಎಂಬ ಸುದ್ದಿ ಹಬ್ಬಿತ್ತು. ರಾಹುಲ್ ಗಾಂಧಿ ಭೇಟಿಯಾದ ಕೆಲವೇ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ದೆಹಲಿ ವಿಮಾನ ಏರಿದ್ದರು. ಆದರೆ ಹೈಕಮಾಂಡ್ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.
ಡಿ.ಕೆ.ಶಿವಕುಮಾರ್‌ಗೂ ಮೊದಲು ಇಂಧನ ಸಚಿವ ಕೆ.ಜೆ.ಜಾರ್ಜ್ ದೆಹಲಿಗೆ ಭೇಟಿ ನೀಡಿದ್ದರು. ಅವರು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರು. ಸಿದ್ದರಾಮಯ್ಯ ಸ್ಪಷ್ಟ ಸಂದೇಶವನ್ನು ತಿಳಿಸಿದ್ದರು.
ಮತ್ತೊಂದು ಕಡೆ ಸಿದ್ದರಾಮಯ್ಯ ಆಪ್ತರಾದ ಸಚಿವ ಜಮೀರ್ ಅಹ್ಮದ್ ಖಾನ್ ರಾಜಸ್ಥಾನಕ್ಕೆ ತೆರಳಿದ್ದರು. ಅವರು ಅಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ಮಾಡಿ, ರಾಜ್ಯ ರಾಜಕೀಯದ ಕುರಿತು ವಿವರಣೆ ನೀಡಿದ್ದರು.
ಈ ಎರಡೂ ಭೇಟಿಗಳ ಬಳಿಕ ಹೈಕಮಾಂಡ್ ನಾಯಕರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಮೊದಲು ಬಜೆಟ್ ಮಂಡನೆ ಮಾಡಲಿ ಬಳಿಕ ನೋಡೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
5 ರಾಜ್ಯಗಳ ವಿಧಾನಸಭೆ ಚುನಾವಣೆ, ಮನರೇಗಾ ವಿರುದ್ಧದ ಹೋರಾಟ, ಕರ್ನಾಟಕದಲ್ಲಿನ ಬಜೆಟ್ ಅಧಿವೇಶನ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಆದ್ದರಿಂದ ನಾಯಕತ್ವ ಬದಲಾವಣೆ ಚರ್ಚೆಗೆ ಅಲ್ಪ ಅಥವ ಪೂರ್ಣ ವಿರಾಮ ಬಿದ್ದಿದೆ.
ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ದೆಹಲಿಗೆ ತೆರಳಲಿ ತಿಂಗಳ ಅಂತ್ಯ ಏನಿಲ್ಲ. ಹೈಕಮಾಂಡ್ ಯಾವಾಗ ಕರೆಯುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ. ಡಿ.ಕೆ.ಶಿವಕುಮಾರ್ ದೆಹಲಿಗೆ ಏಕೆ ಹೋಗಿದ್ದರು, ಯಾರನ್ನು ಭೇಟಿ ಮಾಡಿದರು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ಮತ್ತೊಂದು ಕಡೆ ದೆಹಲಿಯಿಂದ ವಾಪಸ್ ಆದ ಡಿ.ಕೆ.ಶಿವಕುಮಾರ್, “ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಲು ನಾನು, ಸಿಎಂ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಎಐಸಿಸಿ ಅಧ್ಯಕ್ಷರಾಗಿರುವ ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿರ್ದೇಶನದಂತೆ ಮುಂದೆ ಸಾಗುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್‌ಗೆ ಅಸ್ಸಾಂ ಚುನಾವಣಾ ಹೊಣೆಯನ್ನು ಹೈಕಮಾಂಡ್ ನೀಡಿದೆ. ಕರ್ನಾಟಕದ ಅಕ್ಕಪಕ್ಕದ ಕೇರಳ, ತಮಿಳುನಾಡು, ಪುದುಚೇರಿ ಚುನಾವಣೆಗಳಿವೆ. ಆದ್ದರಿಂದ ಸದ್ಯಕ್ಕೆ ನಾಯಕತ್ವ ಬದಲಾವಣೆಯಂತಹ ಸಾಹಸಕ್ಕೆ ಹೈಕಮಾಂಡ್ ‘ಕೈ’ ಹಾಕುವುದು ದೂರದ ಮಾತು ಎನ್ನುತ್ತಾರೆ ರಾಜಕೀಯ ಬಲ್ಲ ತಜ್ಞರು.

