ಮಂಡ್ಯ: ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕುಮಾರ್ ಕೊಪ್ಪ ಅವರ ನೇಮಕವಾಗುತ್ತಿದ್ದಂತೆಯೇ ಮಂಡ್ಯ ಕಾಂಗ್ರೆಸ್ ಪಾಳಯದಲ್ಲಿ ಒಳ ಬೇಗುದಿ ಬಹಿರಂಗವಾಗಿ ಸ್ಪೋಟಿಸಿದೆ.
ಹೈಕಮಾಂಡ್ ನಿರ್ಧಾರಕ್ಕೆ ಸೆಡ್ಡು ಹೊಡೆಯುವ ಹಂತಕ್ಕೆ ಸ್ಥಳೀಯ ನಾಯಕರ ಅಸಮಾಧಾನ ತಲುಪಿದ್ದು, ಪಕ್ಷದ ಆಂತರಿಕ ಕಿತ್ತಾಟ ಬೀದಿಗೆ ಬಂದು ತಲುಪಿದೆ. ರಾಜಕೀಯವನ್ನೂ ಮೀರಿ ಜಾತಿ ಸಮರ ಆರಂಭವಾಗಿದೆ.
ದಲಿತ ನಾಯಕತ್ವಕ್ಕೆ ಅಸೂಯೆಯೋ? ಬೆಂಬಲಿಗರಲ್ಲ ಎಂಬ ತಾತ್ಸಾರವೋ?
ಸಾಮಾನ್ಯವಾಗಿ ನಮ್ಮದು ಹೈಕಮಾಂಡ್ ಪಕ್ಷ ಎಂದು ವೇದಿಕೆಗಳಲ್ಲಿ ಜಪಿಸುವ ಜಿಲ್ಲೆಯ ಪ್ರಭಾವಿ ನಾಯಕರು, ಈಗ ಹೈಕಮಾಂಡ್ ಮಾಡಿದ ಆಯ್ಕೆಯನ್ನೇ ಪರೋಕ್ಷವಾಗಿ ವಿರೋಧಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದಲಿತ ಸಮುದಾಯದ ನಾಯಕರೊಬ್ಬರು ಅಧ್ಯಕ್ಷರಾಗಿದ್ದಾರೆಂಬ ಅಸೂಯೆಯೋ ಅಥವಾ ತಮ್ಮ ಗುಂಪಿನ ಬೆಂಬಲಿಗರಲ್ಲ ಎಂಬ ತಾತ್ಸಾರವೋ ಎನ್ನುವ ಪ್ರಶ್ನೆ ಕಾರ್ಯಕರ್ತರ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಒಕ್ಕಲಿಗ ಪ್ರಾಬಲ್ಯ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಇತರೆ ಜನಾಂಗದ ನಾಯಕರಿಗೆ ಬೆಲೆ ಮತ್ತು ನೆಲೆ ಇಲ್ಲವೇ? ತಲೆತಲಾಂತರದಿಂದ ಪಕ್ಷಕ್ಕೆ ನಿಷ್ಠಾವಂತ ಮತದಾರರಾಗಿರುವ ಸಮುದಾಯಕ್ಕೆ ಅಧ್ಯಕ್ಷ ಸ್ಥಾನದ ಅರ್ಹತೆ ಇಲ್ಲವೇ? ಎನ್ನುವ ಆಕ್ರೋಶ ತಳಮಟ್ಟದ ಕಾರ್ಯಕರ್ತರಲ್ಲಿ ವ್ಯಕ್ತವಾಗುತ್ತಿದೆ.
ಶಾಸಕರ ಅಸಹಕಾರ ಮತ್ತು ಕಹಿ ಅನುಭವ
ನೂತನ ಅಧ್ಯಕ್ಷ ಕುಮಾರ್ ಕೊಪ್ಪ ಅವರು ತಮ್ಮ ಆಯ್ಕೆಯ ಹಿನ್ನೆಲೆಯಲ್ಲಿ ಧನ್ಯವಾದ ಸಲ್ಲಿಸಲು ಹಾಗೂ ಸೌಹಾರ್ದಯುತವಾಗಿ ಭೇಟಿಯಾಗಲು ಯತ್ನಿಸಿದರೆ, ಜಿಲ್ಲೆಯ ಕೆಲ ಶಾಸಕರು ದೂರವಾಣಿ ಕರೆ ಸ್ವೀಕರಿಸಲೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗಿದೆ. ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡರ ನಿವಾಸಕ್ಕೆ ನೂತನ ಅಧ್ಯಕ್ಷರು ತೆರಳಿದ್ದಾಗ ನಡೆದ ಘಟನೆ ಪಕ್ಷದ ಆಂತರಿಕ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಿದೆ. ಮುಖ ಕೊಟ್ಟು ಮಾತನಾಡಿಸುವುದು ಹಾಗಿರಲಿ, ಮನೆಯೊಳಗೂ ಕರೆಯದೆ, ತಂದಿದ್ದ ಹಾರ, ಶಾಲು ಹಾಗೂ ಪೇಟೆಯನ್ನು ಸ್ವೀಕರಿಸದೆ ಭಹಿರಂಗವಾಗೇ ಅಸ್ಪೃಶ್ಯತೆ ಆಚರಿಸಿರುವುದು ಕಾಂಗೈ ನಾಯಕರ ಮನಸ್ಥಿತಿಗೆ ಕನ್ನಡಿ ಹಿಡಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೈಕಮಾಂಡ್ ಅಂಗಳಕ್ಕೆ ದೂರು: ನಾಯಕರಿಗೆ ಸಿಎಂ ಉಗಿದು ವಾಪಸ್ ಕಳುಹಿಸಿದರಾ?
ಅಧ್ಯಕ್ಷಕಾಂಕ್ಷಿಗಳಾಗಿದ್ದ ಕೆಲವರು ಕುಮಾರ್ ಕೊಪ್ಪ ಅವರ ಆಯ್ಕೆಯನ್ನು ಬಹಿರಂಗವಾಗಿ ಸ್ವಾಗತಿಸಿದ್ದರೆ, ಇನ್ನೂ ಕೆಲವರು ತಮ್ಮ ಶಾಸಕರು ಹಾಗೂ ನಾಯಕರ ಮೂಲಕ ಬದಲಾವಣೆಗೆ ಒಳಗೊಳಗೇ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಜಿಲ್ಲೆಯ ನಾಯಕರ ನಿಯೋಗವೊಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿತ್ತು.
ಆದರೆ, ಉನ್ನತ ಮೂಲಗಳ ಮಾಹಿತಿ ಪ್ರಕಾರ ಸಿಎಂ ಡಿ.ಕೆ. ಶಿವಕುಮಾರ್ ಅವರು ನಿಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ನಮ್ಮ ರಾಜ್ಯ ನಾಯಕರ ಆಯ್ಕೆಯಲ್ಲ, ಹೈಕಮಾಂಡ್ ನೇರ ತೀರ್ಮಾನ. ವೀಕ್ಷಕರ ವರದಿ ಆಧಾರದ ಮೇಲೆ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ಇದರಲ್ಲಿ ಜಿಲ್ಲೆಯ ಅಥವಾ ರಾಜ್ಯದ ನಾಯಕರ ಒತ್ತಡವಿಲ್ಲ. ಅಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ, ಮೊದಲು ಹೋಗಿ ಪಕ್ಷ ಸಂಘಟನೆ ಮಾಡಿ ಎಂದು ನೇರವಾಗಿಯೇ ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಮಟ್ಟದಲ್ಲೇ ಕುಮಾರ್ ಕೊಪ್ಪ ಅವರಿಗೆ ಬೆಂಬಲ ವ್ಯಕ್ತವಾಗಿರುವುದರಿಂದ, ಜಿಲ್ಲೆಯ ಭಿನ್ನಮತೀಯ ನಾಯಕರು ಮುಂದೇನು ಮಾಡಲಿದ್ದಾರೆ ಹಾಗೂ ಈ ಒಳ ಬೇಗುದಿ ಜಿಲ್ಲಾ ಕಾಂಗ್ರೆಸ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸರಳತೆಗೆ ಒಲಿದ ಜಿಲ್ಲಾ ಕಾಂಗ್ರೆಸ್ ಪಟ್ಟ; ಕುಮಾರ್ ಕೊಪ್ಪ ಆಯ್ಕೆಯಾಗಿದ್ದು ಹೇಗೆ?
ಮಂಡ್ಯ: ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ಕುಮಾರ್ ಕೊಪ್ಪ ಅವರ ಹೆಗಲಿಗೆ ಜಿಲ್ಲಾ ಅಧ್ಯಕ್ಷತೆಯ ಜವಾಬ್ದಾರಿ ಬಿದ್ದಿದೆ. ಈ ಅಚ್ಚರಿಯ ಆಯ್ಕೆಯ ಹಿಂದಿನ ಸ್ವಾರಸ್ಯಕರ ಹಂತಗಳು ಕೆಳಕಂಡಂತಿವೆ.
ಸಹಜವಾಗಿ ಹೋಗಿ ಸರಳತೆಯಿಂದ ಗುರುತಿಸಿಕೊಂಡ ಕ್ಷಣ
ಕೊಪ್ಪ ಗ್ರಾಮ ಮತ್ತು ಹೋಬಳಿ ಭೌಗೋಳಿಕವಾಗಿ ಮದ್ದೂರು ತಾಲ್ಲೂಕಿಗೆ ಸೇರಿದರೂ, ಚುನಾವಣಾ ವ್ಯಾಪ್ತಿಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಹೈಕಮಾಂಡ್ ವೀಕ್ಷಕರನ್ನು ಕಳುಹಿಸಿ, ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಅಭಿಪ್ರಾಯ ಸಂಗ್ರಹಿಸುತ್ತಿತ್ತು. ನಾಗಮಂಗಲದಲ್ಲಿ ವೀಕ್ಷಕರು ಸಭೆ ನಡೆಸುತ್ತಿದ್ದಾಗ, ಕುಮಾರ್ ಕೊಪ್ಪ ಅವರು ಸಾಮಾನ್ಯ ಕಾರ್ಯಕರ್ತನಂತೆ ಭಾಗವಹಿಸಿ ತಮ್ಮ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಹೋಗಿದ್ದರು.
ಅರ್ಜಿ ಸಲ್ಲಿಸದಿದ್ದರೂ ಸಿಕ್ಕ ಆಹ್ವಾನ:
ಅಭಿಪ್ರಾಯ ಸಂಗ್ರಹಣೆ ವೇಳೆ ಸಭೆಯಲ್ಲಿದ್ದ ಕೆಲವರು ಕುಮಾರ್ ಕೊಪ್ಪ ಅವರ ಹೆಸರನ್ನು ಅಧ್ಯಕ್ಷ ಹುದ್ದೆಗೆ ಸೂಚಿಸಿದರು. ಇದನ್ನು ಗಮನಿಸಿದ ವೀಕ್ಷಕರು, ಕುಮಾರ್ ಕೊಪ್ಪ ಅವರನ್ನು ತಮ್ಮ ಬಳಿಗೆ ಕರೆಸಿ ಅವರ ಸಾಮಾಜಿಕ ಹಿನ್ನೆಲೆ ವಿಚಾರಿಸಿದರು. ನಿಮ್ಮ ಹೆಸರಿಗೆ ಉತ್ತಮ ಬೆಂಬಲವಿದೆ, ನೀವೂ ಒಂದು ಅರ್ಜಿ ಸಲ್ಲಿಸಿ ಎಂದು ವೀಕ್ಷಕರು ಸಲಹೆ ನೀಡಿದರು. ಆದರೆ, ಕೊಪ್ಪ ಅವರು ಯಾವುದೇ ಹಮ್ಮು-ಬಿಮ್ಮಿಲ್ಲದೇ ನೇರವಾಗಿಯೇ ನನಗೆ ಆ ಆಸೆ ಇಲ್ಲ ಎಂದು ನಿರಾಕರಿಸಿದರು. ಆದರೂ ಬಿಡದ ವೀಕ್ಷಕರು ಅರ್ಜಿ ನಮೂನೆ ನೀಡಿ, ನಿಮ್ಮ ಸ್ವವಿವರ ಭರ್ತಿ ಮಾಡಿ ನೀಡಿ ಎಂದು ಒತ್ತಾಯಿಸಿ ಪಡೆದುಕೊಂಡರು.
ಸಾಧನೆ ಮತ್ತು ಆಡಂಬರಕ್ಕಿದ್ದ ವ್ಯತ್ಯಾಸ
ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಇತರ ಆಕಾಂಕ್ಷಿತರು ತಮ್ಮ ರಾಜಕೀಯ ಪ್ರಭಾವ, ಉನ್ನತ ನಾಯಕರೊಂದಿಗಿನ ಭಿನ್ನ-ವಿಭಿನ್ನ ಫೋಟೋಗಳು ಮತ್ತು ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸಿದ್ದರು. ಆದರೆ ಕುಮಾರ್ ಕೊಪ್ಪ ಅವರು ನೆಹರು ಯುವ ಕೇಂದ್ರದಲ್ಲಿ ಸಲ್ಲಿಸಿದ ಪ್ರಾಮಾಣಿಕ ಸೇವೆ, ಅವರಿಗೆ ಬಂದ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ಅವರ ಶ್ರಮವನ್ನು ಮಾತ್ರ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಹೈಕಮಾಂಡ್ ನಾಯಕರು ಪ್ರಚಾರದ ಹಂಗಿಲ್ಲದ ಅವರ ಹಿನ್ನೆಲೆ, ಸೇವಾನಿಷ್ಠೆ ಮತ್ತು ಆಡಂಬರವಿಲ್ಲದ ಸರಳತೆಯನ್ನು ಪರಿಗಣಿಸಿದರು. ಯುವಕರು ಹಾಗೂ ಎಲ್ಲಾ ವರ್ಗದವರಿಗೂ ಸಮಾನ ಅವಕಾಶ ನೀಡಬೇಕು ಎಂಬ ನಿಟ್ಟಿನಲ್ಲಿ, ಕೊನೆಗೆ ಕುಮಾರ್ ಕೊಪ್ಪ ಅವರನ್ನೇ ಮಂಡ್ಯ ಜಿಲ್ಲಾ ಕಾಂಗ್ರೆಸ್ ನೂತನ ಸಾರಥಿಯನ್ನಾಗಿ ಆಯ್ಕೆ ಮಾಡಿದೆ.

