ಬೆಂಗಳೂರು- ಸಚಿವ ಸಂಪುಟ ವಿಸ್ತರಣೆ ಕುರಿತಂತೆ ದೆಹಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಸಭೆಗಳು ನಡೆಯುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇಂದು ದೆಹಲಿಗೆ ತೆರಳಿದ್ದಾರೆ.
ಕಳೆದ ವಾರ ರಾಹುಲ್ ಗಾಂಧಿ ಅವರೊಂದಿಗೆ ನಡೆದಿದ್ದ ಅಪೂರ್ಣ ಚರ್ಚೆಯ ಮುಂದುವರಿದ ಭಾಗವಾಗಿ ಇಂದು ಸಚಿವಾಕಾಂಕ್ಷಿಗಳ ಅಂತಿಮ ಪಟ್ಟಿಗೆ ಹೈಕಮಾಂಡ್ ಅಂತಿಮ ಸ್ಪರ್ಶ ನೀಡಲಿದೆ.
ದೆಹಲಿಗೆ ತೆರಳಿರುವ ನಾಯಕರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಟ್ಟುಹಬ್ಬದ ಶುಭಾಕೋಶ ತಿಳಿಸಿದ ಬಳಿಕ ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.
ಹೈಕಮಾಂಡ್ ಒಪ್ಪಿಗೆ ದೊರೆತರೆ ಮುಂದಿನ ಮೂರ್ನಾಲ್ಕು ದಿನಗಳಲ್ಲೇ ಸಚಿವ ಸಂಪುಟ ವಿಸ್ತರಣೆ ಅಧಿಕೃತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಸಚಿವರಾಗಲು ಸುಮಾರು 50ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದು, ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನವನ್ನು ಕಾಪಾಡಿಕೊಂಡು ಅಂತಿಮ ಪಟ್ಟಿಯನ್ನು ಹೈಕಮಾಂಡ್ ಅನುಮೋದಿಸುವ ನಿರೀಕ್ಷೆಯಿದೆ. ಆಗಸ್ಟ್‌ನಲ್ಲಿ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ
ಯುವ ಮುಖಗಳಿಗೆ ರಾಹುಲ್ ಒಲವು
ಕಳೆದ ಬಾರಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಸಂಪುಟದಲ್ಲಿ ಹೊಸ ಹಾಗೂ ಯುವ ಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ಸ್ಪಷ್ಟ ಒಲವು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಮೂರು ಅಥವಾ ನಾಲ್ಕು ಬಾರಿ ಗೆದ್ದ ಹಿರಿಯ ಶಾಸಕರು ಹಾಗೂ ಅರ್ಹ ಯುವ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.
ದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿವಾಕಾಂಕ್ಷಿಗಳು
ದೆಹಲಿಯಲ್ಲಿ ಬೀಡುಬಿಟ್ಟ ಸಚಿವಾಕಾಂಕ್ಷಿಗಳು
ರಾಜ್ಯ ನಾಯಕರಿಗಿಂತ ಮುಂಚಿತವಾಗಿಯೇ ಹಲವು ಶಾಸಕರು ದೆಹಲಿಗೆ ದೌಡಾಯಿಸಿದ್ದು, ಹೈಕಮಾಂಡ್ ಮಟ್ಟದಲ್ಲಿ ತೀವ್ರವಲಾಬಿ ನಡೆಸುತ್ತಿದ್ದಾರೆ.
ಕಳೆದ 10-15 ದಿನಗಳಿಂದ ದೆಹಲಿಯಲ್ಲಿಯೇ ಮೊಕ್ಕಾಂ ಹೂಡಿರುವ ಶಾಸಕರ ಜತೆಗೆ ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ನರೇಂದ್ರ ಸ್ವಾಮಿ, ಸಲೀಂ ಅಹಮದ್, ಆರ್.ಬಿ. ತಿಮ್ಮಾಪೂರ ಹಾಗೂ ಅಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಹೈಕಮಾಂಡ್ ಕೃಪಾಕಟಾಕ್ಷಕ್ಕಾಗಿ ಪ್ರಯತ್ನ ಮುಂದುವರಿಸಿದ್ದಾರೆ.
ಸಂಪುಟದಲ್ಲಿ ಕೆಲವು ಸ್ಥಾನಗಳು ಖಾಲಿ ಇರುವುದರಿಂದ ಹಾಗೂ ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸಲು ವಿಸ್ತರಣೆ ಅನಿವಾರ್ಯ ಎಂಬ ಚರ್ಚೆ ನಡೆಯುತ್ತಿದೆ.
ಜಾತಿ ಮತ್ತು ಪ್ರಾದೇಶಿಕ ಸಮತೋಲನ ಸವಾಲು
ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ಸಂದರ್ಭದಲ್ಲಿ ಜಾತಿ, ಸಮುದಾಯ ಹಾಗೂ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವುದು ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.
ಸಚಿವ ಸ್ಥಾನ ಹಂಚಿಕೆಯ ಅಂತಿಮ ನಿರ್ಧಾರವನ್ನು ಸಂಪೂರ್ಣವಾಗಿ ಪಕ್ಷದ ವರಿಷ್ಠರು (ಹೈಕಮಾಂಡ್) ಕೈಗೊಳ್ಳಲಿದ್ದು, ದೆಹಲಿ ಸಭೆಯ ನಂತರ ಸಂಪುಟ ವಿಸ್ತರಣೆಯ ದಿನಾಂಕ ಮತ್ತು ನೂತನ ಸಚಿವರ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆಯಿದೆ.
ಸಂಭಾವ್ಯ ಸಚಿವಾಕಾಂಕ್ಷಿಗಳು
ಸಂಭಾವ್ಯ ಸಚಿವಾಕಾಂಕ್ಷಿಗಳ ಪಟ್ಟಿ
ಮಧು ಬಂಗಾರಪ್ಪ, ಎಚ್.ಸಿ. ಮಹದೇವಪ್ಪ, ಪುಟ್ಟರಂಗಶೆಟ್ಟಿ, ದಿನೇಶ್ ಗುಂಡೂರಾವ್, ಶಿವರಾಜ್ ತಂಗಡಗಿ, ಸಂತೋಷ್ ಲಾಡ್, ಬಾಲಕೃಷ್ಣ, ಚೆಲುವರಾಯಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮಣ ಸವದಿ, ಎನ್.ಎ. ಹ್ಯಾರೀಸ್, ಆರತಿ ಕೃಷ್ಣಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ಹಾಗೂ ಯುವ ಶಾಸಕರು ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ. ಬಣ ರಾಜಕೀಯ ಹಾಗೂ ಪ್ರಾದೇಶಿಕ ಸಮತೋಲನವನ್ನು ಕಾಪಾಡಿಕೊಂಡು ಹೈಕಮಾಂಡ್ ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ಎಂಬುದು ಇಂದಿನ ದೆಹಲಿ ಸಭೆಯ ಬಳಿಕ ಸ್ಪಷ್ಟಗೊಳ್ಳಲಿದೆ.

