HomeKarnatakaಸಿಎಂ ಖಡಕ್ ಸೂಚನೆ ಬೆನ್ನಲ್ಲೇ ಪೊಲೀಸರಿಂದ ಬಿಗ್ ಆಪರೇಷನ್: ರಾಜ್ಯಾದ್ಯಂತ 800 ಬಾಲ ಕಾರ್ಮಿಕರ ರಕ್ಷಣೆ

ಸಿಎಂ ಖಡಕ್ ಸೂಚನೆ ಬೆನ್ನಲ್ಲೇ ಪೊಲೀಸರಿಂದ ಬಿಗ್ ಆಪರೇಷನ್: ರಾಜ್ಯಾದ್ಯಂತ 800 ಬಾಲ ಕಾರ್ಮಿಕರ ರಕ್ಷಣೆ

ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ ಬೆನ್ನಲ್ಲೇ ಪೊಲೀಸರು ರಾಜ್ಯಾದ್ಯಂತ ಬಿಗ್ ಆಪರೇಷನ್ ನಡೆಸಿದ್ದು, ರಾಜ್ಯಾದ್ಯಂತ ಒಟ್ಟು 800 ಬಾಲಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 503 ಬಾಲ ಕಾರ್ಮಿಕರ ರಕ್ಷಣೆ ಮಾಡಲಾಗಿದೆ.

ರಾಜ್ಯಾದ್ಯಂತ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮುಖ್ಯಮಂತ್ರಿ ಅವರ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಪೊಲೀಸರು ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದಾರೆ. ಸೆಪ್ಟೆಂಬರ್ 12ರವರೆಗೆ ಒಟ್ಟು 962 ಪೊಲೀಸ್ ಠಾಣೆಗಳ ವ್ಯಾಪ್ತಿಯ 16,951 ಸ್ಥಳಗಳನ್ನು ಪರಿಶೀಲಿಸಿ, 800 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ ಬೆಂಗಳೂರು ನಗರದ 5,897 ಸ್ಥಳಗಳಿಂದ 503 ಮಕ್ಕಳು ರಕ್ಷಿಸಲ್ಪಟ್ಟಿದ್ದರೆ, ವಿಜಯಪುರದಲ್ಲಿ (1,156 ಸ್ಥಳಗಳು) 72, ತುಮಕೂರಿನಲ್ಲಿ (660 ಸ್ಥಳಗಳು) 33 ಹಾಗೂ ಬೆಳಗಾವಿಯಲ್ಲಿ (592 ಸ್ಥಳಗಳು) 12 ಮಕ್ಕಳನ್ನು ರಕ್ಷಿಸಲಾಗಿದೆ.

ರಕ್ಷಿಸಲಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗಳಿಗೆ ಹಾಗೂ ಪೋಷಕರಿಗೆ ಹಸ್ತಾಂತರಿಸಲಾಗಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ವಿಜಯಪುರದಲ್ಲಿ 3 ಮತ್ತು ಕೊಡಗಿನಲ್ಲಿ 2 ಪ್ರಕರಣ ದಾಖಲಿಸಲಾಗಿದ್ದು, ಹಲವು ಜಿಲ್ಲೆಗಳಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಕ್ಕಳನ್ನು ಕಳಿಸಿ ಎಂದು ಪೋಷಕರ ಅಳಲು

ಮಕ್ಕಳನ್ನು ಕಳುಹಿಸಿ ಎಂದು ಬೆಂಗಳೂರು ಬಾಲ ಮಂದಿರದ ಎದುರು ಪೋಷಕರು ಪಟ್ಟುಹಿಡಿದಿದ್ದಾರೆ. ಡೇರಿ ಸರ್ಕಲ್ ಬಳಿಯ ಬಾಲಮಂದಿರದ ಬಳಿ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಆದರೆ, ಮಂಗಳವಾರದವರೆಗೂ ಮಕ್ಕಳನ್ನು ಪೋಷಕರಿಗೆ ಹಸ್ತಾಂತರಿಸಲು ಆಗುವುದಿಲ್ಲ. ಬಾಲ ಕಾರ್ಮಿಕರನ್ನು ರಕ್ಷಿಸಿದ್ದರೆ ನೇರವಾಗಿ ಪೋಷಕರಿಗೆ ಹಸ್ತಾಂತರ ಮಾಡುವಂತಿಲ್ಲ.

ಅವರನ್ನು ಚೈಲ್ಡ್ ವೆಲ್ಫೇರ್ ಕಮಿಟಿಯ ಮುಂದೆ ಹಾಜರುಪಡಿಸಬೇಕು. ಚೈಲ್ಡ್ ವೆಲ್ಫೇರ್ ಕಮಿಟಿ ನಿಜವಾದ ಪೋಷಕರನ್ನು ಪರಿಶೀಲಿಸಿ ಕಾರ್ಮಿಕರಾಗಿ ಮಕ್ಕಳನ್ನು ಮಕ್ಕಳು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿ ಆಯಾ ಮಕ್ಕಳನ್ನು ಪೋಷಕರ ಜೊತೆಗೆ ಕಳುಹಿಸುತ್ತಾರೆ. ಅಥವಾ ಮಕ್ಕಳನ್ನು ಮಾನವ ಕಳ್ಳ ಸಾಗಣೆ ಮಾಡಿ ಮಾರಾಟ ಮಾಡಿ ಕೆಲಸಕ್ಕೆ ಇಟ್ಟುಕೊಂಡಿರುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಲಾಗುವುದು.

ಸಂಬಂಧಿಸಿದ ಇಲಾಖೆಗೆ ಚೈಲ್ಡ್ ವೆಲ್ಫೇರ್ ಕಮಿಟಿ ಶಿಫಾರಸು ಮಾಡುತ್ತಿದೆ. ಎರಡು ದಿನ ರಜೆ ಹಿನ್ನೆಲೆ ಮಂಗಳವಾರ ಚೈಲ್ಡ್ ವೆಲ್ಫೇರ್ ಕಮಿಟಿ ಮುಂದೆ ಹಾಜರುಪಡಿಸಲಾಗುವುದು. ಹೀಗಾಗಿ ಮಂಗಳವಾರದವರೆಗೆ ಮಕ್ಕಳು ಬಾಲ ಮಂದಿರದಲ್ಲಿ ಇರಲೇಬೇಕಿದೆ ಎನ್ನಲಾಗಿದೆ.

ಬಾಲಕಾರ್ಮಿಕರು, ಕಿಶೋರ ಕಾರ್ಮಿಕರ ರಕ್ಷಣೆ

ಶಿವಮೊಗ್ಗ: ಭದ್ರಾವತಿ ತಾಲೂಕಿನಲ್ಲಿ ಬಾಲಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಜಂಟಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ, ಒಟ್ಟು 05 ಮಕ್ಕಳನ್ನು ರಕ್ಷಿಸಲಾಗಿದೆ.

ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಆಶ್ರಿತಾ ಸ್ವಯಂ ಸೇವಾ ಸಂಸ್ಥೆ (ಭದ್ರಾವತಿ) ಇವರುಗಳ ಜಂಟಿ ಭಾಗವಹಿಸುವಿಕೆಯೊಂದಿಗೆ ಈ ಕಾರ್ಯಾಚರಣೆ ನಡೆಯಿತು.

ಭದ್ರಾವತಿ ನಗರದ ವಿವಿಧ ವಾಣಿಜ್ಯ ಸಂಸ್ಥೆಗಳು, ಗ್ಯಾರೇಜುಗಳು ಹಾಗೂ ಗ್ರಾಮೀಣ ಪ್ರದೇಶದ ಅಲೆಮಾರಿ ತಾಣಗಳಲ್ಲಿ ಕೈಗೊಂಡ ವಿಶೇಷ ಪರಿಶೀಲನೆ ವೇಳೆ 03 ಬಾಲಕಾರ್ಮಿಕರು ಹಾಗೂ 02 ಕಿಶೋರ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ತಕ್ಷಣವೇ ಕೆಲಸದ ಸ್ಥಳದಿಂದ ಬಿಡುಗಡೆಗೊಳಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ದಾಖಲಿಸಲಾಗಿದೆ.

ಬಾಲಕಾರ್ಮಿಕ ನಿಷೇಧ: 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ಯಮಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.

ಶಿಕ್ಷೆ ಮತ್ತು ದಂಡ: ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ರೂ. ನಿಂದ 50,000 ರೂ. ಗಳವರೆಗೆ ದಂಡ (ಅಥವಾ ಎರಡನ್ನೂ) ವಿಧಿಸಬಹುದು. ಅಪರಾಧ ಪುನರಾವರ್ತನೆಯಾದರೆ 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಪುನರ್ವಸತಿ ನಿಧಿ: ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ತಪ್ಪು ಎಸಗಿದ ಮಾಲೀಕರು ಪ್ರತಿಯೊಂದು ಮಗುವಿಗೆ 20,000 ರೂ. ಗಳನ್ನು ಮಕ್ಕಳ ಪುನರ್ವಸತಿ ಕಲ್ಯಾಣ ನಿಧಿಗೆ ಪಾವತಿಸಬೇಕಾಗುತ್ತದೆ.

ಶಿಕ್ಷಣದ ಹಕ್ಕು: ಉಚಿತ ಮತ್ತು ಕಡ್ಡಾಯ ಶಿಕ್ಷಣವು ಪ್ರತಿಯೊಂದು ಮಗುವಿನ ಹಕ್ಕಾಗಿದ್ದು, ಇದನ್ನು ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ದೂರು ಸಲ್ಲಿಸಬಹುದಾದ ಇಲಾಖೆಗಳು: ಪೋಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಬಹುದು.

ಸಹಾಯವಾಣಿ ಸಂಖ್ಯೆಗಳು:

ಮಕ್ಕಳ ಸಹಾಯವಾಣಿ: 1098

ಕಾರ್ಮಿಕರ ಸಹಾಯವಾಣಿ: 155214

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ (ಬೆಂಗಳೂರು): 080-22115291/92 ನ್ನು‌ ಸಂಪರ್ಕಿಸಬಹುದು.

ದಾಳಿ ವೇಳೆ ಮೇಲ್ಕಂಡ ವಿಷಯಗಳು ಹಾಗೂ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರ ಕುರಿತು ಮಾಲೀಕರಿಗೆ ಕಾನೂನು ಅರಿವು ಮೂಡಿಸಲಾಯಿತು.

ಈ ಜಂಟಿ ಕಾರ್ಯಾಚರಣೆಯಲ್ಲಿ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರು, ಯೋಜನಾ ನಿರ್ದೇಶಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಆಶ್ರಿತಾ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular