ನವದೆಹಲಿ: “ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಕೆಲಸವಿಲ್ಲದೆ ಸೋಷಿಯಲ್ ಮೀಡಿಯಾ, ಆರ್‌ಟಿಐ ಕಾರ್ಯಕರ್ತರಾಗಿ ಬದಲಾಗಿ ಇಡೀ ವ್ಯವಸ್ಥೆಯ ಮೇಲೆಯೇ ದಾಳಿ ಮಾಡುತ್ತಾರೆ” ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೆಹಲಿಯಲ್ಲಿ ಕಪ್ಪು ಕೋಟು ಧರಿಸಿರುವ ಸಾವಿರಾರು ವಕೀಲರ ಪದವಿಗಳೇ ನಕಲಿ ಇರುವ ಶಂಕೆ ವ್ಯಕ್ತಪಡಿಸಿರುವ ಕೋರ್ಟ್, ಈ ಬಗ್ಗೆ ಸಿಬಿಐ (CBI) ತನಿಖೆ ನಡೆಸುವ ಇಂಗಿತ ವ್ಯಕ್ತಪಡಿಸಿದೆ.
ಹಿರಿಯ ವಕೀಲ ಹುದ್ದೆಗಾಗಿ ಪಟ್ಟು ಹಿಡಿದಿದ್ದ ಅರ್ಜಿದಾರನಿಗೆ ತರಾಟ:
ದೆಹಲಿ ಹೈಕೋರ್ಟ್‌ನಲ್ಲಿ ತಮಗೂ ಹಿರಿಯ ನ್ಯಾಯವಾದಿ (Senior Advocate) ಹುದ್ದೆ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು, ಅರ್ಜಿದಾರ ವಕೀಲನ ಫೇಸ್‌ಬುಕ್ ಭಾಷೆ ಹಾಗೂ ವೃತ್ತಿಪರ ನಡವಳಿಕೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಪೀಠದ ಖಡಕ್ ಮಾತುಗಳು:
ಅರ್ಜಿದಾರನನ್ನು ತರಾಟೆಗೆ ತೆಗೆದುಕೊಂಡ ಸಿಜೆಐ, “ವ್ಯವಸ್ಥೆಯ ಮೇಲೆ ದಾಳಿ ಮಾಡುವ ಸಮಾಜದ ಪರಾವಲಂಬಿಗಳು ಈಗಾಗಲೇ ಇದ್ದಾರೆ, ನೀವು ಅವರೊಂದಿಗೆ ಕೈಜೋಡಿಸಲು ಬಯಸುತ್ತೀರಾ? ಇಡೀ ಜಗತ್ತೇ ಹಿರಿಯ ನ್ಯಾಯವಾದಿಯಾಗಲು ಅರ್ಹತೆ ಹೊಂದಿರಬಹುದು, ಆದರೆ ನಿಮ್ಮ ವೃತ್ತಿಪರ ನಡವಳಿಕೆ ನೋಡಿದರೆ ಕನಿಷ್ಠ ನೀವು ಅದಕ್ಕೆ ಅರ್ಹರಲ್ಲ. ಹೈಕೋರ್ಟ್ ಏನಾದರೂ ನಿಮಗೆ ಹಿರಿಯ ವಕೀಲ ಹುದ್ದೆಯನ್ನು ನೀಡಿದರೆ, ನಾವು ಅದನ್ನು ರದ್ದುಗೊಳಿಸುತ್ತೇವೆ,” ಎಂದು ಖಾರವಾಗಿ ಎಚ್ಚರಿಸಿದರು.
“ಬಾರ್ ಕೌನ್ಸಿಲ್‌ಗೆ ವೋಟಿನ ರಾಜಕೀಯ”: ಸಿಬಿಐ ತನಿಖೆಗೆ ಚಿಂತನೆ
ವಿಚಾರಣೆಯ ಸಂದರ್ಭದಲ್ಲಿ ದೇಶದ ಕಾನೂನು ವಲಯದಲ್ಲಿರುವ ನಕಲಿ ಜಾಲದ ಬಗ್ಗೆ ಸಿಜೆಐ ಗಂಭೀರ ಕಳವಳ ವ್ಯಕ್ತಪಡಿಸಿದರು. ಕಪ್ಪು ಕೋಟು ಧರಿಸಿರುವ ಅನೇಕ ವಕೀಲರ ಪದವಿಗಳ ನೈಜತೆಯನ್ನು ಪರಿಶೀಲಿಸಲು ಸಿಬಿಐ ತನಿಖೆಗೆ ಆದೇಶಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದರು. “ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಏಕೆಂದರೆ ಅವರಿಗೆ ವೋಟುಗಳ ರಾಜಕೀಯ ಬೇಕಿದೆ,” ಎಂದು ಮಾರ್ಮಿಕವಾಗಿ ನುಡಿದರು.

