HomeCrimeಸಿಜೆ ರಾಯ್ ಆತ್ಮಹತ್ಯೆಗೆ ಕಾರಣ ನಿಗೂಢ: ಪ್ರಕರಣದ ತನಿಖೆ ಸಿಐಡಿಗೆ?

ಸಿಜೆ ರಾಯ್ ಆತ್ಮಹತ್ಯೆಗೆ ಕಾರಣ ನಿಗೂಢ: ಪ್ರಕರಣದ ತನಿಖೆ ಸಿಐಡಿಗೆ?

ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಸಿಜೆ ರಾಯ್ (57) ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದೆ. ಬೆಂಗಳೂರಿನ ಅಶೋಕ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಸಿಜೆ ರಾಯ್ ಶವ ಇನ್ನು ಆಸ್ಪತ್ರೆಯಲ್ಲಿಯೇ ಇದೆ.

ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣವನ್ನು ಕರ್ನಾಟಕ ಸರ್ಕಾರ ಗಂಭೀರವಾರಿ ಪರಿಗಣಿಸಿದೆ. ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಆರೋಪಗಳ ಹಿನ್ನಲೆಯಲ್ಲಿ ಉನ್ನತ ಮಟ್ಟದ ತನಿಖೆಗೆ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ ಘಟನೆ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಜೊತೆ ಮಾತನಾಡಿ ವಿವರಗಳನ್ನು ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಚರ್ಚೆಗಳು ನಡೆದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಜೊತೆ ಈ ಕುರಿತು ಚರ್ಚಿಸಿದ ಬಳಿಕ ಡಾ.ಎಂ.ಎ.ಸಲೀಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಬಳಿಕ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಬೀಳಲಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

ಎಫ್‌ಐಆರ್ ದಾಖಲು: ಅಶೋಕ ನಗರ ಠಾಣೆ ಪೊಲೀಸರು ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಅನುಮಾಸ್ಪದ ಸಾವು ಎಂದು ಉಲ್ಲೇಖಿಸಲಾಗಿದೆ.

ಐಟಿ ದಾಳಿ, ಸಿಜೆ ರಾಯ್ ವ್ಯವಹಾರಗಳು, ಕೌಟುಂಬಿಕ ಸ್ಥಿತಿಗತಿ, ಬೆದರಿಕೆಗಳು ಇರುವ ಕುರಿತು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಸಿಜೆ ರಾಯ್‌ಗೆ ಸೇರಿದ್ದು ಎನ್ನಲಾದ ಡೈರಿ, ಅವರ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದೆ.

ಶುಕ್ರವಾರ ಸಂಜೆ ಸಿಜೆ ರಾಯ್ ತಮ್ಮ ಕಚೇರಿಯ ಚೇಂಬರ್‌ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸ್ಥಳದಲ್ಲಿ ಎಫ್‌ಎಸ್ಎಲ್ ನಡೆಸಿದ ಪರಿಶೀಲನೆಯ ವರದಿ ಇನ್ನೂ ಬರಬೇಕಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆ ವರದಿಗಳು ಕೈ ಸೇರಿದ ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವ ಕುರಿತು ಅಂತಿಮ ತೀರ್ಮಾನವಾಗಲಿದೆ.

ಕೇರಳದಿಂದ ಸಿಜೆ ರಾಯ್ ಕುಟುಂಬಸ್ಥರು, ಸಹೋದರ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಸಿಜೆ ರಾಯ್ ಒತ್ತಡದಲ್ಲಿದ್ದೇನೆ, ಬೆಂಗಳೂರಿಗೆ ಬಾ ಎಂದು ಸಹೋದರನಿಗೆ ಶುಕ್ರವಾರ ಕರೆ ಮಾಡಿದ್ದರು. ಅವರು ಶನಿವಾರ ಬರುವುದಾಗಿ ಹೇಳಿದ್ದರು ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.

ಸಿಜೆ ರಾಯ್ ಅವರಿಗೆ ಬಂದಿರುವ ಮೊಬೈಲ್ ಕರೆಗಳು, ಸಂದೇಶಗಳು. ಇವರು ಮಾಡಿರುವ ಕರೆಗಳು, ಕಳಿಸಿರುವ ಸಂದೇಶಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಐಟಿ ಅಧಕಾರಿಗಳ ಕಿರುಕುಳ ಆರೋಪ ಕೇಳಿ ಬಂದ ಕಾರಣ ಪ್ರಕರಣ ಇನ್ನಷ್ಟು ನಿಗೂಢವಾಗಿದೆ.

ಕೇರಳದಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ಅವರು ರಾಜಕೀಯ ಪಕ್ಷಗಳಿಗೆ ಹಣಕಾಸಿನ ನೆರವು ನೀಡಬಹುದು ಎಂದು ಐಟಿ ಅಧಿಕಾರಿಗಳು ಸುಮಾರು 6 ತಿಂಗಳಿನಿಂದ ಅವರ ವಿರುದ್ಧ ತನಿಖೆ ಮಾಡುತ್ತಿದ್ದರು ಎಂಬ ಮಾಹಿತಿ ಇದೆ.

ಡಿಸೆಂಬರ್ 1 ರಿಂದ ಸಿಜೆ ರಾಯ್ ನಿವಾಸ, ಕಚೇರಿಗಳಿಗೆ ಹಲವು ಬಾರಿ ಐಟಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದರು. ಹಲವಾರು ದಾಖಲೆಗಳನ್ನು ಸಂಗ್ರಹ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಒತ್ತಡದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸದ್ಯದ ಮಾಹಿತಿಯಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular