ಹಬ್ಬಕ್ಕೆಂದು ಸಂಬಂಧಿಗಳ ಮನೆಗೆ ಬಂದಿದ್ದ ಮಾಜಿ ಪತ್ನಿ ಹಾಗೂ ಪುತ್ರಿ ಸೇರಿ ನಾಲ್ವರ ಮೇಲೆ ವ್ಯಕ್ತಿಯೊಬ್ಬ ಗುರುವಾರ ರಾತ್ರಿ ಇಲ್ಲಿನ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ಆಸಿಡ್ ದಾಳಿ ನಡೆಸಿದ್ದ.
ಆಸಿಡ್ ದಾಳಿಯಲ್ಲಿ ಗಾಯಗೊಂಡು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂತ್ರಸ್ತರಾದ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಮಾರ್ಚ್ 19ರಂದು ಗುರುವಾರ ಸಂಜೆ ಸುಮಾರು 5.30ಕ್ಕೆ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ವಿಜಯ್ ಅವರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಉಪಸ್ಥಿತರಿದ್ದು, ಸಂತ್ರಸ್ತರ ಆರೋಗ್ಯದ ಸ್ಥಿತಿಗತಿ ಹಾಗೂ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.

