ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಆರಂಭಕ್ಕೆ ದಿನ ಗಣನೆ ಆರಂಭವಾಗಿದೆ. ಕಳೆದ ಬಾರಿ ಅದೇ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಟೂರ್ನಿಯ ಚೊಚ್ಚಲ ಪಂದ್ಯವನ್ನು ಆಡಲಿದ್ದು, ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕಣಕ್ಕಿಳಿಯಲಿದೆ.
ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎಲ್ಲರ ಚಿತ್ತ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದತ್ತ ಇದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಈಗಾಗಲೇ ಮೈದಾನಕ್ಕಿಳಿದು ಬೆವರು ಹರಿಸಿ ತಾಲೀಮಿನಲ್ಲಿ ತೊಡಗಿಕೊಂಡಿದ್ದು, ತಂಡವನ್ನು ಉದ್ದೇಶಿಸಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮಾತನಾಡಿ ಟೂರ್ನಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿದ್ದಾರೆ.
‘ಕಳೆದ ವರ್ಷ ನಾವು ಚಾಂಪಿಯನ್ನಾಗಿ ಹೊರಹೊಮ್ಮಿದ್ದೇವೆ. ಇದನ್ನು ಸಾಧಿಸಲು ಕಳೆದ ಎರಡು ಮೂರು ಆವೃತ್ತಿಗಳಲ್ಲಿ ತೀರಾ ಕಷ್ಟಪಟ್ಟು ಶ್ರಮಿಸಿದ್ದೇವೆ. ಹೀಗಾಗಿ ಈ ಬಾರಿ ಇತರೆ ತಂಡಗಳು ನಮ್ಮ ವಿರುದ್ಧ ಕಠಿಣ ಯೋಜನೆಗಳೊಂದಿಗೆ ಕಣಕ್ಕಿಳಿಯಲಿದ್ದು ಸುಲಭವಾಗಿರುವುದಿಲ್ಲ. ಆದ್ದರಿಂದ ನಾವು ಯಾವುದೇ ದಿನವನ್ನು ವ್ಯರ್ಥ ಮಾಡುವುದು ಬೇಡ. ಎಲ್ಲರೂ ಸಿದ್ದರಾಗಿ. ನಾವು ಭಾಗವಹಿಸುವ ಪ್ರತಿ ವಿಭಾಗದಲ್ಲಿಯೂ ಸಹ ಯಾವುದೇ ನಿಮಿಷವನ್ನು ವ್ಯರ್ಥ ಮಾಡದೆ 120% ಶ್ರಮ ಹಾಕಬೇಕಿದೆ. ನಾವು ಚಾಲೆಂಜರ್ಸ್ ಎನಿಸಿಕೊಳ್ಳುವುದಕ್ಕೆ ಅರ್ಹರಿದ್ದೇವೆ ಎಂಬುದನ್ನು ಎಲ್ಲರ ಮುಖದಲ್ಲಿಯೂ ನಾನು ಕಾಣುತ್ತಿದ್ದೇನೆ’ ಎಂದು ಕೊಹ್ಲಿ ಹೇಳಿಕೆ ನೀಡಿದ್ದಾರೆ.

