ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯಲ್ಲಿ ಶಾಲಾ ಬಸ್ ಡಿಕ್ಕಿಯಾಗಿ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಗೋಪಾಲಗೌಡ ಬಡಾವಣೆಯ ನಿವಾಸಿ ಮಂಜುನಾಥ್ ಎಂಬುವರ ಪುತ್ರ ಆರ್ಯನ್ ಮೃತಪಟ್ಟ ಮಗು. ಮಂಜುನಾಥ್ ಅವರ ಮತ್ತೊಬ್ಬ ಮಗ ಆರುಷ್ ಖಾಸಗಿ ಶಾಲೆಯಲ್ಲಿ ಎಲ್.ಕೆ.ಜಿ. ಓದುತ್ತಿದ್ದು ಮಧ್ಯಾಹ್ನ ಸ್ಕೂಲ್ ಬಸ್ ನಲ್ಲಿ ಮನೆಗೆ ಮರಳಿದ್ದಾನೆ. ಆತನನ್ನು ಕರೆದುಕೊಂಡು ಬರಲು ಮನೆ ಕೆಲಸದ ಮಹಿಳೆ ಆಶಾ ಅವರು ಬಸ್ ಬಳಿಗೆ ಹೋಗಿದ್ದಾರೆ. ಈ ವೇಳೆ ಅವರ ಹಿಂದೆಯೇ ಮಗು ಆರ್ಯನ್ ಕೂಡ ರಸ್ತೆಗೆ ಬಂದಿದ್ದು, ಆಶಾ ಅವರು ಆರುಷ್ ನನ್ನು ಬಸ್ ನಿಂದ ಇಳಿಸಿಕೊಳ್ಳುವಾಗ ಆರ್ಯನ್ ಬಸ್ ನ ಮುಂಭಾಗದಿಂದ ರಸ್ತೆ ದಾಟಿದೆ. ಇದನ್ನು ಗಮನಿಸದ ಚಾಲಕ ಉಮೇಶ್ ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿದ್ದು, ಮಗುವಿಗೆ ಬಸ್ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಮಗುವಿನ ತಲೆ ಮತ್ತು ಮುಖಕ್ಕೆ ತೀವ್ರ ಗಾಯವಾಗಿದ್ದು, ಅದೇ ಸ್ಕೂಲ್ ಬಸ್ ನಲ್ಲಿ ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆಗಾಗಲೇ ಮಗು ಮೃತಪಟ್ಟಿದೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ.

