ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಕಟೌಟ್ ವಿಡಿಯೋಗೆ ದೇಶ ವಿರೋಧಿ ಹಾಡು ಬಳಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿದೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಟಿಪ್ಪು ನಗರದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಇದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಕಳೆದ ವರ್ಷ ಈದ್ ಮಿಲಾದ್ ವೇಳೆ ಉತ್ತರ ಪ್ರದೇಶದ ಕಾನ್ಪುರದಿಂದ ಪ್ರಾರಂಭವಾಗಿದ್ದ ಈ ಬ್ಯಾನರ್ ವಿವಾದ, ಕರ್ನಾಟಕ ಸೇರಿ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಅದೇ ಬ್ಯಾನರ್ ಮತ್ತೆ ಚಿಕ್ಕಮಗಳೂರಿನಲ್ಲಿ ಕಂಡುಬಂದಿದೆ.
ಕಳೆದ ವರ್ಷ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಮೆರವಣಿಗೆ ವೇಳೆ ಮೊದಲ ಬಾರಿಗೆ ಈ ರೀತಿಯ ಬ್ಯಾನರ್ ಬಳಸಲಾಗಿತ್ತು. ಉತ್ತರ ಪ್ರದೇಶದ ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ‘ಐ ಲವ್ ಮೊಹಮ್ಮದ್’ ಘೋಷವಾಕ್ಯ ವೈರಲ್ ಆಗಿತ್ತು. ಮುಂಬೈ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರದ ನಾಗ್ಪುರ, ವೋಮಿನ್ಪುರದಲ್ಲೂ ‘ಐ ಲವ್ ಮೊಹಮ್ಮದ್’ ಹೆಸರಿನಲ್ಲಿ ರ್ಯಾಲಿಗಳು ನಡೆದಿದ್ದವು.
ಅಷ್ಟಕ್ಕೂ ಐ ಲವ್ ಮೊಹಮ್ಮದ್ ಬ್ಯಾನರ್ ಮತ್ತು ಘೋಷಣೆ ವಿವಾದ ಕರ್ನಾಟಕದಲ್ಲಿ ಇದು ಮೊದಲೇನಲ್ಲ. ಈ ಹಿಂದೆಯೂ ರಾಜ್ಯದ ಹಲವೆಡೆ ಈ ವಿಚಾರ ಸಂಘರ್ಷಕ್ಕೆ ಕಾರಣವಾಗಿತ್ತು. ಬೆಳಗಾವಿ, ದಾವಣಗೆರೆ, ಆಳಂದ ಸೇರಿ ಇತರ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದಿದ್ದವು. ಪೊಲೀಸ್ ಪ್ರಕರಣಗಳು ದಾಖಲಾಗಿ, ರಾಜಕೀಯ ಜಟಾಪಟಿಗಳಿಗೂ ಈ ವಿಚಾರ ಕಾರಣವಾಗಿತ್ತು.

