ಮಂಡ್ಯ: ಅಕ್ರಮ ಖಾತೆ ಸೃಷ್ಟಿ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ ಬೆನ್ನು ನೋವಿನ ನೆಪ ಹೇಳಿ ಮಂಡ್ಯದ ಮಿಮ್ಸ್ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಗೆಳತಿಯೊಂದಿಗೆ ರಾಜ್ಯಾತಿಥ್ಯ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಾನ್ಸ್ ಟೇಬಲ್ ಓರ್ವರನ್ನು ಅಮಾನತುಗೊಳಿಸಿ ಆದೆಶ ಹೊರಡಿಸಲಾಗಿದೆ.
ಜಿಲ್ಲಾ ಸಶಸ್ತ್ರ ಮೀಸಲು (DAR) ಪಡೆಯ ಪೇದೆ ಚಂದ್ರು ಎಂಬುವವರನ್ನು ಸಸ್ಪೆಂಡ್ ಮಾಡಿ ಮಂಡ್ಯ ಎಸ್‌ಪಿ ಡಾ. ಶೋಭಾರಾಣಿ ಆದೇಶ ಹೊರಡಿಸಿದ್ದಾರೆ.
ವಿಚಾರಣಾಧೀನ ಕೈದಿ ಮಹಮದ್ ಹುಸೇನ್ ಎಂಬಾತ ಬೆನ್ನು ನೋವಿನ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ತನ್ನ ಗೆಳತಿಯೊಂದಿಗೆ ಉಳಿದುಕೊಂಡು ರಾಜ್ಯಾತಿಥ್ಯ ಪಡೆಯುತ್ತಿದ್ದ. ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ್ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು.
ಇದನ್ನು ಕಂಡು ಆಕ್ರೋಶಗೊಂಡ ನ್ಯಾಯಾಧೀಶರು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ನ್ಯಾಯಾಧೀಶರ ಸೂಚನೆಯ ಬೆನ್ನಲ್ಲೇ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ತಕ್ಷಣ ಮಂಡ್ಯ ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಕರ್ತವ್ಯ ಲೋಪದ ಬಗ್ಗೆ ಸ್ವತಃ ಪರಿಶೀಲಿಸಿದ ಡಿಜಿಪಿ, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರತರಲು ಡಿಐಜಿ ಕಾರಾಗೃಹ (ದಕ್ಷಿಣ ವಲಯ) ದಿವ್ಯಾಶ್ರೀ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಅಕ್ರಮ ಖಾತೆ ಸೃಷ್ಟಿ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಶ್ರೀರಂಗಪಟ್ಟಣದ ಎಡಿಎಲ್ ಆರ್ ಮಹಮ್ಮದ್ ಹುಸೇನ್ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿರಬೇಕಾಗಿತ್ತು. ಆದರೆ ಜೈಲಿನ ಅಧಿಕಾರಿಗಳು ಆತನಿಗೆ ಅನಾರೋಗ್ಯದ ನೆಪವೊಡ್ಡಿ ಮಿಮ್ಸ್ ಆಸ್ಪತ್ತೆಯ ಸ್ಪೆಷಲ್ ರೂಮ್ ನಲ್ಲಿ ಅಡ್ಮಿಟ್ ಮಾಡಿಸಿ ವಿಐಪಿ ಸೌಲಭ್ಯ ಒದಗಿಸಿದ್ದರು.

