ಬೆಂಗಳೂರು: ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ನಾನೇ. ಒಬ್ಬರಿಗಷ್ಟೇ ಡಿಸಿಎಂ ಹುದ್ದೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ ಹೇಳಿದ್ದರಲ್ಲಿ ಸತ್ಯವಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಹೈಕಮಾಂಡ್ ಚರ್ಚೆ ವೇಳೆ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರು ನನ್ನ ಜತೆಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದರು.
ಒಳಗಡೆ ಚರ್ಚೆಯ ವೇಳೆ ಸಿದ್ದರಾಮಯ್ಯ ಅವರು ಒಂದೇ ಡಿಸಿಎಂ ಸ್ಥಾನ ಇರಲಿ ಮತ್ತು ಪರಮೇಶ್ವರ್ ಅವರಿಗೆ ಆ ಸ್ಥಾನ ನೀಡಿ ಎಂದು ಹೈಕಮಾಂಡ್‌ಗೆ ಹೇಳಿದ್ದರು. ಈ ವಿಷಯವನ್ನು ಸಿದ್ದರಾಮಯ್ಯ ಅವರು ನನ್ನ ಬಳಿಯೂ ಹೇಳಿದ್ದರು. ಹಾಗಾಗಿ ನಿನ್ನೆ ಅವರು ನೀಡಿರುವ ಹೇಳಿಕೆಯಲ್ಲಿ ಸತ್ಯವಿದೆ ಎಂದು ತಿಳಿಸಿದರು.
ತಮ್ಮ ರಾಜೀನಾಮೆ ಸಂದರ್ಭದಲ್ಲಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿರುವುದಾಗಿ ಸಿದ್ದರಾಮಯ್ಯ ನಮಗೆಲ್ಲ ಹೇಳಿದ್ದರು. ಆದರೆ, ಅವರ ಆ ಸಲಹೆಯನ್ನು ಹೈಕಮಾಂಡ್ ಪರಿಗಣಿಸಲಿಲ್ಲ. ಡಿಸಿಎಂ ಸ್ಥಾನದ ಆಯ್ಕೆ ಸಂದರ್ಭದಲ್ಲಿ ಅನೇಕ ನಾಯಕರ ಹೆಸರುಗಳು ಕೇಳಿಬರುತ್ತಿದ್ದವು. ಆದರೆ ಒಂದೇ ಡಿಸಿಎಂ ಹುದ್ದೆ ಇರಬೇಕು ಎಂಬುದು ಸಿದ್ದರಾಮಯ್ಯ ಅವರ ನಿಲುವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ‘ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ’ದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಹೇಳಿದಕ್ಕೆ ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ನೀಡಿದ್ದಾರೆ. ಒಬ್ಬರಿಗೇ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು ಹಾಗೂ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಬೇಕು ಎಂದು ಹೈಕಮಾಂಡ್‌ಗೆ ಹೇಳಿದ್ದೆ ಎಂದುದ್ದರು.
ಕಾರ್ಯಕ್ರಮದಲ್ಲಿ ಎಸ್‌ಸಿ ಸಮುದಾಯಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡುತ್ತಿದ್ದಾಗ, ಸಭಿಕರೊಬ್ಬರು ದಲಿತ ಸಿಎಂ ವಿಚಾರವನ್ನು ಪ್ರಸ್ತಾಪಿಸಿದರು. ಇದರಿಂದ ಕೊಂಚ ಭಾವೋದ್ವೇಗಕ್ಕೊಳಗಾದ ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ಯಾರು? ಆರಂಭದಲ್ಲಿ ನಾಲ್ಕೈದು ಜನರನ್ನು ಡಿಸಿಎಂ ಮಾಡುವ ಯೋಜನೆಯಿತ್ತು. ಆದರೆ, ಒಬ್ಬರಿಗಷ್ಟೇ ಡಿಸಿಎಂ ಹುದ್ದೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿಸಿದ್ದು ನಾನೇ ಎಂದು ನೇರವಾಗಿ ಹೇಳಿದ್ದರು.

