HomeKarnatakaಬಜೆಟ್ ಮಂಡನೆ ಬಳಿಕ ಮುಖ್ಯಮಂತ್ರಿ ಬದಲಾವಣೆ; ಏನಿದು ಹೊಸ ಲೆಕ್ಕಾಚಾರ?

ಬಜೆಟ್ ಮಂಡನೆ ಬಳಿಕ ಮುಖ್ಯಮಂತ್ರಿ ಬದಲಾವಣೆ; ಏನಿದು ಹೊಸ ಲೆಕ್ಕಾಚಾರ?

ಕರ್ನಾಟಕ ಕಾಂಗ್ರೆಸ್‌ನ ನಾಯಕತ್ವ ಬದಲಾವಣೆ ಗೊಂದಲ 2025ರಲ್ಲಿಯೇ ಅಂತ್ಯವಾಯಿತೇ?, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇನ್ನೂ ಎರಡೂವರೆ ವರ್ಷ ಮುಂದುವರೆಯಲಿದ್ದಾರೆಯೇ?. ಈ ಪ್ರಶ್ನೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಹೈಕಮಾಂಡ್ ನಾಯಕರು ಮಾತ್ರ ಉತ್ತರ ಹೇಳಲು ಸಾಧ್ಯ.

2026 ಕಾಂಗ್ರೆಸ್ ಪಾಲಿಗೆ ಸವಾಲಿನ ವರ್ಷವಾಗಿದೆ. ಏಕೆಂದರೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಕನಿಷ್ಠ ಮೂರು ರಾಜ್ಯದಲ್ಲಿಯಾದರೂ ಅಧಿಕಾರವನ್ನು ಪಡೆದು ಪಕ್ಷ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಬೇಕಿದೆ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಗೊಂದಲ ನಡುವೆಯೇ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್‌ ಸಿದ್ಧತೆ ಪ್ರಾರಂಭಿಸಿದ್ದಾರೆ. ಈಗಾಗಲೇ 16 ಬಾರಿ ಬಜೆಟ್ ಮಂಡಿಸಿ ದಾಖಲೆ ಮಾಡಿರುವ ಅವರು ಈ ಬಾರಿ ಮಾರ್ಚ್‌ನಲ್ಲಿ 17ನೇ ಬಜೆಟ್ ಮಂಡಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಜೆಟ್ ಮಂಡನೆ ಬಳಿಕ ಹೊಸ ಸಿಎಂ?; ಕರ್ನಾಟಕ ನಾಯಕತ್ವ ಬದಲಾವಣೆ ಗೊಂದಲದ ಸಮಯದಲ್ಲಿಯೇ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಬಜೆಟ್ ಮಂಡಿಸುತ್ತೇನೆ ಎಂದು ಹೇಳಿದ್ದರು. ಹಾಗಾದರೆ ಬಜೆಟ್ ಮಂಡನೆ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯೇ? ಎಂಬುದು ಸದ್ಯದ ಪ್ರಶ್ನೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜನವರಿ 10ರ ಬಳಿಕ ದೆಹಲಿಗೆ ವಾಪಸ್ ಆಗಲಿದ್ದಾರೆ. ಸದ್ಯಕ್ಕೆ ಅವರು ನಾಯಕತ್ವ ಬದಲಾವಣೆ ಕುರಿತು ಚರ್ಚೆಗೆ ಅಲ್ಪ ವಿರಾಮ ನೀಡಿದ್ದಾರೆ. ಆದರೆ ದೆಹಲಿಗೆ ವಾಪಸ್ ಆದ ಬಳಿಕ ಈ ಕುರಿತು ಅವರು ಗಮನಹರಿಸುವ ನಿರೀಕ್ಷೆ ಇದೆ.

ಸಿಎಂ ಸಿದ್ದರಾಮಯ್ಯ ಜನವರಿ 6, 2026ರಂದು ಹೊಸ ದಾಖಲೆ ಮಾಡಲಿದ್ದಾರೆ. ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜು ಅರಸು ದಾಖಲೆಯನ್ನು ಅವರು ಮುರಿಯಲಿದ್ದು, 7 ವರ್ಷ 238 ದಿನಗಳ ಕಾಲ ಮುಖ್ಯಮಂತ್ರಿಯಾಗಿ ದಾಖಲೆ ಬರೆಯಲಿದ್ದಾರೆ.

ಅಲ್ಲದೇ 17ನೇ ಬಜೆಟ್ ಮಂಡಿಸುವ ಮೂಲಕ ಮತ್ತೊಂದು ಇತಿಹಾಸ ಬರೆಯಲಿದ್ದಾರೆ. ಬಜೆಟ್ ಮಂಡನೆ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವ ಕುರಿತು ಸಿದ್ದರಾಮಯ್ಯ ಈಗಾಗಲೇ ಆಪ್ತರ ಬಳಿ ಚರ್ಚಿಸಿದ್ದಾರೆ. ಆದರೆ ಆಪ್ತರು ಈ ಬಗ್ಗೆ ಒಪ್ಪಿಗೆ ಕೊಟ್ಟಿಲ್ಲ.

ನಾಯಕತ್ವ ಬದಲಾವಣೆ ವಿಚಾರದಲ್ಲಿ ಈಗಾಗಲೇ ಎಲ್ಲಾ ಹೊಣೆಯನ್ನು ರಾಹುಲ್ ಗಾಂಧಿ ಹೆಗಲಿಗೆ ಹಾಕಿದ್ದಾರೆ ಸಿದ್ದರಾಮಯ್ಯ. ಡಿಸೆಂಬರ್ 22ರಂದು ಮೈಸೂರಿನಲ್ಲಿ ಮಾತನಾಡಿದ್ದ ಅವರು, “ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನನ್ನ‌ ಪೂರ್ಣ ಸಹಮತವಿದೆ. ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.

“ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ” ಎಂದು ತಿಳಿಸಿದ್ದರು.

“ಮಾಧ್ಯಮದವರೇ ನಾಯಕತ್ವ ಬದಲಾವಣೆಯ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತಿದ್ದಾರೆ. ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯ ಏನಿದೆ? ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿದ ಮೇಲೂ ಪುನಃ ಚರ್ಚೆ ಮಾಡುವ ಅಗತ್ಯವೇ ಇಲ್ಲ” ಎಂದು ಹೇಳಿದ್ದರು.

ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಮನರೇಗಾ ಹೆಸರನ್ನು ಬದಲಾವಣೆ ಮಾಡುವ ವಿಕಸಿತ ಭಾರತ: ಜಿ ರಾಮ್ ಜಿ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಮನರೇಗಾ ಹೆಸರು ಬದಲಾವಣೆ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಹೋರಾಟಕ್ಕೆ ತಯಾರಿ ನಡೆಸಿದೆ.

ಇದರ ಜೊತೆಗೆ ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಕ್ಷ ತಯಾರಿ ನಡೆಸಬೇಕಿದೆ. ಆದ್ದರಿಂದ ಹೈಕಮಾಂಡ್ ನಾಯಕರು ಸಂಪೂರ್ಣ ಬಹುಮತದೊಂದಿಗೆ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದ ರಾಜಕೀಯದ ಕಡೆ ಗಮನಹರಿಸುತ್ತದೆಯೇ? ಅಥವ ಯಥಾಸ್ಥಿತಿ ಕಾಪಾಡಿಕೊಳ್ಳುತ್ತದೆಯೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಕರ್ನಾಟಕದಲ್ಲಿ 2028ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗ ನಾಯಕತ್ವ ಬದಲಾವಣೆ ಮಾಡಲು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಸಾಲು ಸಾಲು ಚುನಾವಣೆಗಳಿವೆ. ನಾಯಕತ್ವ ಬದಲಾವಣೆಗೆ ಶಾಸಕರು ಒಪ್ಪಬೇಕು, ಮುಂದಿನ ಚುನಾವಣೆಯಲ್ಲಿ ಅದು ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಇಂತಹ ಎಲ್ಲಾ ಅಂಶಗಳನ್ನು ಪರಿಶೀಲನೆ ನಡೆಸಿದ ಬಳಿಕ ಹೈಕಮಾಂಡ್ ತನ್ನ ತೀರ್ಮಾನ ಕೈಗೊಳ್ಳಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular