ಚಾಮರಾಜನಗರದಲ್ಲಿ ಆಯೋಜನೆ ಮಾಡಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಉದ್ಯೋಗ ಮೇಳದಲ್ಲಿ ಆಯ್ಕೆಯಾದ 193 ಅಭ್ಯರ್ಥಿಗಳಿಗೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ನೇಮಕಾತಿ ಪತ್ರ ವಿತರಣೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಂಜೀವಿನಿ-ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಇನ್ನಿತರ ಇಲಾಖೆ, ನಿಗಮ ಆಶ್ರಯದಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಮಾಡಲಾಗಿತ್ತು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆನ್ಲೈನ್ ಮೂಲಕ 668, ಆಫ್ಲೈನ್ ಮೂಲಕ 602 ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,290 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 495 ಪುರುಷರು, 790 ಮಹಿಳೆಯರು ಸೇರಿದ್ದರು.
ಉದ್ಯೋಗ ಮೇಳದಲಿ 101 ಉದ್ಯೋಗದಾತ ಕಂಪನಿಗಳು ಭಾಗವಹಿಸಿದ್ದವು. 85 ಪುರುಷರು, 108 ಮಹಿಳೆಯರು ಸೇರಿದಂತೆ ಒಟ್ಟು 193 ಅಭ್ಯರ್ಥಿಗಳು ಸ್ಥಳದಲ್ಲಿಯೇ ಉದ್ಯೋಗಕ್ಕೆ ಆಯ್ಕೆಯಾದರು.
190 ಪುರುಷರು, 290 ಮಹಿಳೆಯರು ಸೇರಿದಂತೆ ಒಟ್ಟು 480 ಅಭ್ಯರ್ಥಿಗಳು ಉದ್ಯೋಗಕ್ಕಾಗಿ 2ನೇ ಹಂತದ (ಶಾರ್ಟ್ ಲಿಸ್ಟ್) ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಸಂಸದ ಸುನೀಲ್ ಬೋಸ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಸ್ಥಳದಲ್ಲಿಯೇ ಉದ್ಯೋಗಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉದ್ಯೋಗ ನೇಮಕ ಪತ್ರ ನೀಡಿ ಶುಭ ಹಾರೈಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು ಮಾತನಾಡಿ, “ಪ್ರತಿಯೊಬ್ಬರು ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಖಾಸಗಿ ಕ್ಷೇತ್ರಗಳಲ್ಲೂ ಸಾಕಷ್ಟು ಉತ್ತಮ ಉದ್ಯೋಗಗಳು ಇವೆ. ಅರ್ಹತೆಗೆ ತಕ್ಕ ಉದ್ಯೋಗ ಪಡೆಯಲು ನೆರವಾಗಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಇನ್ನಿತರ ಇಲಾಖೆಗಳು ಸ್ಥಳೀಯವಾಗಿ ಉದ್ಯೋಗ ಮೇಳವನ್ನು ಏರ್ಪಡಿಸುತ್ತಿವೆ” ಎಂದರು.
“ಇಂತಹ ಅವಕಾಶವನ್ನು ಯುವಜನರು ಬಳಸಿಕೊಳ್ಳಬೇಕು. ಸ್ಥಳೀಯ ನಿರುದ್ಯೋಗಿ ಯುವಜನರು ಸ್ವಾವವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಆಯೋಜಿಸಲಾಗುವ ಉದ್ಯೋಗ ಮೇಳ ದಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಸಲಹೆ ಮಾಡಿದರು.

