ಚಾಮರಾಜನಗರ: ಮಹಿಳೆಯರಂತೆ ಬಟ್ಟೆ ಧರಿಸಿ ಬಂದು ಮನೆಗಳಿಗೆ ನುಗ್ಗಿ ಮಹಿಳೆಯರ ಒಳ ಉಡುಪುಗಳನ್ನು ಕದ್ದು ಸೈಕೋಪಾತ್ ಓರ್ವ ಪರಾರಿಯಗೌತ್ತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಸೈಕೋಪಾತ್ ನ ಉಪಟಳದಿಂದ ಸ್ಥಳೀಯ ನಿವಾಸಿಗಳು, ಮಹಿಳೆಯರು ಆತಂಕಕ್ಕೊಳಗಾಗಿದ್ದಾರೆ. ಹೌಸಿಂಗ್ ಬೋರ್ಡ್ ಕಾಲೋನಿ, ಇಂದಿರಾನಗರ ಮತ್ತು ಕರಿನಂಜಿಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಈ ವಿಚಿತ್ರ ಕೃತ್ಯಗಳು ಬೆಳಕಿಗೆ ಬಂದಿವೆ.
ರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆಯ ನಡುವೆ, ಒಬ್ಬ ಅಪರಿಚಿತ ವ್ಯಕ್ತಿ ಮಹಿಳೆಯರ ವೇಷಧರಿಸಿ ಮನೆಗಳ ಮುಂದೆ ಒಣಗಲು ಹಾಕಿರುವ ಮಹಿಳೆಯರ ಒಳ ಉಡುಪುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದಾನೆ. ಈ ಸೈಕೋಪಾತ್ ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿ ಒಂದು ವಿಕೃತಿಯನ್ನು ಮೆರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತನ ಕೃತ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಇವು ಬೆಳಕಿಗೆ ಬಂದ ನಂತರ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ.
ಈ ಪ್ರದೇಶದ ಮಹಿಳೆಯರು ಮತ್ತು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಈ ಸೈಕೋಪಾತ್ ಮಕ್ಕಳ ಮೇಲೆ ದುಷ್ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಚಿನ್ನಾಭರಣ ಕಳ್ಳತನದಂತಹ ಪ್ರಕರಣಗಳನ್ನು ಕಂಡಿದ್ದೇವೆ, ಆದರೆ ಒಳ ಉಡುಪುಗಳನ್ನು ಕದ್ದು ಧರಿಸುವ ಇಂತಹ ವಿಕೃತಕಾಮಿಯ ಕೃತ್ಯವು ತೀರಾ ವಿಚಿತ್ರವಾಗಿದೆ.
ಚಾಮರಾಜನಗರ ಜಿಲ್ಲಾ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೈಕೋಪಾತ್‌ನನ್ನು ಶೀಘ್ರವಾಗಿ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

