ದೆಹಲಿ ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಯೊಬ್ಬರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಕಾರಣಕ್ಕೆ ನಿಯಮಗಳಿಂದ ವಿನಾಯಿತಿ ನೀಡಲಾಗುವುದಿಲ್ಲ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶಿಸ್ತು ಹಾಗೂ ಸಮಾನತೆ ಮುಖ್ಯ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸರ್ಕಾರಿ ಉದ್ಯೋಗಗಳಿಗಾಗಿ ನಡೆಸುವ ಪರೀಕ್ಷೆಗಳು ಮತ್ತು ದೈಹಿಕ ಪರೀಕ್ಷೆಗಳ ವಿಷಯದಲ್ಲಿ ಅಭ್ಯರ್ಥಿಗಳು ಕಟ್ಟುನಿಟ್ಟಾದ ಶಿಸ್ತು ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹಿಂದುಳಿದ ವರ್ಗದವರು ಎಂಬ ಕಾರಣ ನೀಡಿ ನಿಯಮಗಳನ್ನು ಉಲ್ಲಂಘಿಸುವುದು ಅಥವಾ ವಿಶೇಷ ಸಹಾನುಭೂತಿಯನ್ನು ನಿರೀಕ್ಷಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ದೆಹಲಿ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯೊಬ್ಬರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ, ಜನವರಿ 2024 ರಲ್ಲಿ ನಡೆಯಬೇಕಿದ್ದ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಅನಾರೋಗ್ಯದ ಕಾರಣ ನೀಡಿ ಹಾಜರಾಗಿರಲಿಲ್ಲ. ತನಗೆ ಇನ್ನೊಂದು ಅವಕಾಶ ನೀಡಬೇಕೆಂದು ಅವರು ಕೋರಿದ್ದರು. ಈ ಬಗ್ಗೆ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ (CAT) ಮತ್ತು ದೆಹಲಿ ಹೈಕೋರ್ಟ್ ಅಭ್ಯರ್ಥಿಯ ಪರವಾಗಿ ತೀರ್ಪು ನೀಡಿದ್ದವು. ಇದನ್ನು ಪ್ರಶ್ನಿಸಿ ದೆಹಲಿ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್ನ ಪ್ರಮುಖ ಅಂಶಗಳು: ಜಸ್ಟಿಸ್ ದೀಪಂಕರ್ ದತ್ತಾ ಮತ್ತು ಜಸ್ಟಿಸ್ ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠವು ಈ ಕೆಳಗಿನಂತೆ ತೀರ್ಪು ನೀಡಿದೆ:
- ಸಮಾನ ಅವಕಾಶ: ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಸಹಾನುಭೂತಿ, ದಯೆ ಅಥವಾ ಸಾಮಾಜಿಕ ಹಿನ್ನೆಲೆಯಂತಹ ಅಂಶಗಳಿಗೆ ಸ್ಥಾನವಿರಬಾರದು. ಎಲ್ಲರಿಗೂ ಸಮಾನವಾದ ಸ್ಪರ್ಧಾತ್ಮಕ ವಾತಾವರಣ ಇರಬೇಕು.
- ಜವಾಬ್ದಾರಿಯರಿವು: ಅಭ್ಯರ್ಥಿಯು ದೈಹಿಕ ಪರೀಕ್ಷೆಗೆ ಹಾಜರಾಗದಿರುವುದನ್ನು ಕೋರ್ಟ್ “ಜವಾಬ್ದಾರಿರಹಿತ” ನಡವಳಿಕೆ ಎಂದು ಕರೆದಿದೆ.
- ನಿಯಮ ಎಲ್ಲರಿಗೂ ಒಂದೇ: ಲಕ್ಷಾಂತರ ಜನರು ಸ್ಪರ್ಧಿಸುತ್ತಿರುವಾಗ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು. ಒಬ್ಬ ವ್ಯಕ್ತಿಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
- ವಿನಾಯಿತಿ ಇಲ್ಲ: ತಾನು ಹಿಂದುಳಿದ ವರ್ಗಕ್ಕೆ ಸೇರಿದವನಾದ್ದರಿಂದ ವಿನಾಯಿತಿ ನೀಡಬೇಕೆಂಬ ಅಭ್ಯರ್ಥಿಯ ವಾದವನ್ನು ಕೋರ್ಟ್ ತಿರಸ್ಕರಿಸಿದೆ. “ಹಿಂದುಳಿದ ವರ್ಗಕ್ಕೆ ಸೇರಿದಾಕ್ಷಣ ಅದು ನಿರ್ಣಾಯಕ ಅಂಶವಾಗಬಾರದು” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

