ಚಾಮರಾಜನಗರದ ಸೋಮವಾರಪೇಟೆ ಬಡಾವಣೆಗೆ ಜಿಲ್ಲಾಧಿಕಾರಿ ಶ್ರೀರೂಪ ದಿಢೀರ್ ಭೇಟಿ ನೀಡಿದರು. ಸ್ವಚ್ಚತೆ, ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿಗಳು ಮುಂಜಾನೆ ಚಾಮರಾಜನಗರ ಪಟ್ಟಣದ ವಾರ್ಡ್-1 ಮತ್ತು 2ರ ವ್ಯಾಪ್ತಿಯ ಸೋಮವಾರಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಕುಡಿಯುವ ನೀರು, ಸ್ವಚ್ಚತೆ ಇನ್ನಿತರ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಿದರು.
ಸೋಮವಾರಪೇಟೆ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಕೊಳವೆಬಾವಿಗಳು ಇನ್ನಿತರ ನೀರು ಒದಗಿಸುವ ಮೂಲಗಳನ್ನು ವೀಕ್ಷಿಸಿದರು.
ನೀರು ಪೂರೈಸುವ ಕೊಳವೆಬಾವಿಯನ್ನು ಪುನಃ ಕೊರೆದು ಮತ್ತಷ್ಟು ಆಳದಿಂದ ನೀರು ಸರಬರಾಜು ಮಾಡಲು ಹಾಗೂ ಪುನಶ್ಚೇತನದಂತಹ ಕ್ರಮಗಳಿಂದ ನೀರು ಒದಗಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಗತ್ಯಬಿದ್ದಲ್ಲಿ ಹೊಸದಾಗಿ ಕೊಳವೆಬಾಯಿ ಕೊರೆದು ಸಮರ್ಪಕವಾಗಿ ನೀರು ಪೂರೈಸುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ಕೊಟ್ಟರು.
ಮುಖ್ಯ ಒಳಚರಂಡಿಗೆ ಮನೆಮನೆಗಳ ಚರಂಡಿ ಜೋಡಣೆ ಕಾರ್ಯವನ್ನು ಆದಷ್ಟು ಬೇಗನೆ ಕೈಗೊಳ್ಳಲು ಸೂಚಿಸಲಾಗುವುದು. ಇದರಿಂದ ಚರಂಡಿ ಸಂಬಂಧ ಸಮಸ್ಯೆಗಳು ಪರಿಹಾರವಾಗಲಿವೆ ಎಂದ ಜಿಲ್ಲಾಧಿಕಾರಿಗಳು ಹೇಳಿದರು.
ಸ್ಥಳೀಯ ಪ್ರದೇಶದ ಚರಂಡಿಯೊಂದರ ನೀರು ಖಾಸಗಿ ಜಮೀನಿಗೆ ಸೇರುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳುವಂತೆ ನಿವಾಸಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮವಹಿಸುವ ಕುರಿತು ಇಂಜಿನಿಯರ್‌ಗೆ ಸೂಚಿಸಿದರು.
ಬಡಾವಣೆಯಲ್ಲಿ ನಿರ್ವಹಿಸಲಾಗುತ್ತಿರುವ ಸ್ವಚ್ಚತೆಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿಯವರು ನೈರ್ಮಲ್ಯ ಕಾರ್ಯಗಳು ಪರಿಪೂರ್ಣವಾಗಿರಬೇಕು. ಕಸ ಸಂಗ್ರಹಣೆ ವಾಹನಗಳು ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಸಾರ್ವಜನಿಕರು ಸಹ ಹಸಿ ಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸ್ವಚ್ಚತೆಗೆ ಸಹಕರಿಸಬೇಕು ಎಂದು ಹೇಳಿದರು.
ಕೆಲವೆಡೆ ಬೀದಿ ದೀಪ ಸರಿಯಾಗಿ ನಿರ್ವಹಿಸದೇ ಇರುವ ಕುರಿತು ಸ್ಥಳೀಯರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಈ ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲು ತಿಳಿಸಿದರು.

