ಬೆಂಗಳೂರು: ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗಿಸಿದ ಪ್ರಕರಣ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಪರೀಕ್ಷಾ ಕೇಂದ್ರದ ಮೂವರು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಸಿಇಟಿ ಪರೀಕ್ಷೆ ಮೊದಲ ದಿನವೇ ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಯದೇ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ತಾಕೀತು ಮಾಡಿದ್ದರು. ಇದರಿಂದ ಅನಿವಾರ್ಯವಾಗಿ ವಿದ್ಯಾರ್ಥಿಗಳು ಜನಿವಾರವನ್ನು ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದರು. ಸುಮಾರು ಐವರು ವಿದ್ಯಾರ್ಥಿಗಳಿಗೆ ಸಿಬ್ಬಂದಿಗಳು ಜನಿವಾರ ತೆಗೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಘಟನೆ ಬೆನ್ನಲ್ಲೇ ಇಂದು ಪೋಷಕರು ಹಾಗೂ ಧಾರ್ಮಿಕ ಮುಖಂಡರು ಪರೀಕ್ಷಾ ಕೇಂದ್ರದ ಬಳಿ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಬಿತ್ತಿ ಪತ್ರ ಹಿಡಿದು ಪ್ರತಿಭಟಿಸಿದ್ದರು. ಪ್ರಕರಣ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಕೃಪಾನಿಧಿ ಕಾಲೇಜು ಆಡಳಿತ ಮಂಡಳಿ ಜನಿವಾರ ತೆಗೆಸಿದ್ದ ಮೂವರು ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ,
ಕೃಪಾನಿಧಿ ಕಾಲೇಜಿನ ಸಿಬ್ಬಂದಿಗಳಾದ ಸುಧಾಕರ್, ಗಿರಿಜಮ್ಮ ಹಾಗೂ ಸರಿತಾ ಅವರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ. ತನಿಖೆ ವರದಿ ಬರುವವರೆಗೂ ಮುಂದಿನ ಆದೇಶದವರೆಗೆ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

