HomeKarnatakaಮೇ 25ರಿಂದ ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಸಿಇಟಿ ಸೀಟು ಹಂಚಿಕೆ ಮಂಥನ: ಕೆಇಎ ವತಿಯಿಂದ...

ಮೇ 25ರಿಂದ ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಸಿಇಟಿ ಸೀಟು ಹಂಚಿಕೆ ಮಂಥನ: ಕೆಇಎ ವತಿಯಿಂದ ಆ್ಯಪ್ ಬಿಡುಗಡೆ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಸಂಬಂಧ ಜಾಗೃತಿ ಮೂಡಿಸುವ 2026ನೇ ಸಾಲಿನ ಸಿಇಟಿ ಸೀಟು ಹಂಚಿಕೆ ಮಂಥನ ತರಬೇತಿ ಕಾರ್ಯಾಗಾರ ಇಂದು ಇಲ್ಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಚೇರಿಯಲ್ಲಿ ನಡೆಯಿತು.

ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಪ್ರತಿನಿಧಿಗಳಿಗೆ ಆಯೋಜಿಸಿದ್ದ ಸೀಟು ಹಂಚಿಕೆ ಮಂಥನ ತರಬೇತಿ ಕಾರ್ಯಾಗಾರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಥನಕ್ಕೆ ಬರುವ ವಿದ್ಯಾರ್ಥಿಗಳು/ಪೋಷಕರಿಗೆ ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣ ತೋರಿಸುವ ಕೆಲಸವೂ‌ ಆಗಬೇಕು ಎಂದು ಸಲಹೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಕಾಲೇಜುಗಳಲ್ಲಿನ‌ ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್, ಕ್ಯಾಂಟೀನ ಇತ್ಯಾದಿಯನ್ನು ಓಪನ್ ಡೇ ಘೋಷಿಸುವ ಮೂಲಕ ತೋರಿಸಬೇಕು. ಇದರಿಂದ ಪ್ರವೇಶ ಪಡೆದ ನಂತರ ಅದಿಲ್ಲ-ಇದಿಲ್ಲ ಎಂದು ದೂರುವುದು ತಪ್ಪುತ್ತದೆ. ಹಾಗೆಯೇ ಕಾಲೇಜುಗಳು ಇದೊಂದು ಅವಕಾಶವೆಂದು ತಿಳಿದು ಅದರ ಲಾಭ ಪಡೆಯಬೇಕು ಎಂದೂ ಅವರು ಸಲಹೆ ನೀಡಿದರು.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾತನಾಡಿ, ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಮೇ 25ರಿಂದ 30ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿದರು.

ಪ್ರತಿ ಕಾಲೇಜಿನಿಂದಲೂ ಮೂರು- ನಾಲ್ಕು ಮಂದಿ ಉಪನ್ಯಾಸಕರನ್ನು ಆಹ್ವಾನಿಸಿ, ಸೀಟು ಹಂಚಿಕೆ ಬಗ್ಗೆ ಇಡೀ ದಿನ ತರಬೇತಿ ನೀಡಲಾಯಿತು. 170ಕ್ಕೂ ಹೆಚ್ಚು ಉಪನ್ಯಾಸಕರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತರಬೇತಿ ಪಡೆದ ಈ ಉಪನ್ಯಾಸಕರು, ತಮ್ಮ ಕಾಲೇಜುಗಳಲ್ಲಿ ನಡೆಯುವ ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು/ಪೋಷಕರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಕಳೆದ ಬಾರಿ ಕೇವಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದ ಈ‌ ಮಂಥನ ಕಾರ್ಯಾಗಾರ ಈ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿಯೂ ನಡೆಯಲಿದೆ ಎಂದು ಪ್ರಸನ್ನ ಅವರು ವಿವರಿಸಿದರು.

ಮುಂಗಡವಾಗಿ ದಿನಾಂಕ ಮತ್ತು ಸಮಯ ಕಾಯ್ದಿರಿಸಿಕೊಂಡು ಬರುವ ಹಾಗೆ ಕೆಇಎ ವತಿಯಿಂದಲೇ ಆ್ಯಪ್ ಬಿಡುಗಡೆ ಮಾಡಲಿದ್ದು, ಕೊನೆ ಕ್ಷಣದ ಗೊಂದಲಗಳಿಗೆ ತೆರೆ ಬೀಳಲಿದೆ. ಸ್ಲಾಟ್ ಬುಕ್ ಮಾಡಿಕೊಂಡು ಬಂದವರಿಗೆ ಕಾಲೇಜುಗಳಲ್ಲಿ ತರಬೇತಿ ನೀಡಲಾಗುವುದು. ಆಪ್ಷನ್ಸ್ ದಾಖಲು, ಸೀಟು ಹಂಚಿಕೆ, ಚಾಯ್ಸ್ ದಾಖಲು, ಶುಲ್ಕ ಪಾವತಿ ಹಾಗೂ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಹಂತಗಳ ಮಾಹಿತಿ ಇಲ್ಲದೆ ಅನೇಕರು ತೊಂದರೆಗೆ ಒಳಗಾಗುತ್ತಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸ್ವಾಗತ ಕೋರಿದ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು/ಪೋಷಕರಿಗೆ ಮನದಟ್ಟಾಗುವ ಹಾಗೆ ವಿವರಿಸುವ ದೊಡ್ಡ ಜವಾಬ್ದಾರಿ ಇದೆ ಎಂದು ಉಪನ್ಯಾಸಕರನ್ನು ಉದ್ದೇಶಿಸಿ ಹೇಳಿದರು.

ಬೆಳಿಗ್ಗೆ ಮತ್ತು ಮಧ್ಯಾಹ್ನ – ಎರಡು ಗೋಷ್ಠಿಗಳ ಮೂಲಕ ಆಹ್ವಾನಿತರಿಗೆ ತರಬೇತಿ ನೀಡಲಾಯಿತು. ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.‌ಮಂಜುನಾಥ ವಂದಿಸಿದರು.

ಕಲ್ಬುರ್ಗಿ ಇಎಸ್ಐ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು, ಶಿವಮೊಗ್ಗ ಮತ್ತು ಗದಗ ಸರ್ಕಾರಿ ಮೆಡಿಕಲ್ ಕಾಲೇಜು, ಕಲ್ಬುರ್ಗಿ ಯ ವಿಟಿಯು ಎಂಜಿನಿಯರಿಂಗ್ ಕಾಲೇಜು ಹೊರತುಪಡಿಸಿ ಎಲ್ಲ ಕಾಲೇಜುಗಳ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular