ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದೆ.
ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಬಿಎಸ್ ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಗಳ ಅಣಕು ಫಲಿತಾಂಶ ಪ್ರಕಟಿಸಲಾಗಿದೆ.
ಜೂನ್ 30ರಂದು ಬೆಳಿಗ್ಗೆ 10ಗಂಟೆವರೆಗೆ ದಾಖಲಿಸಿರುವ ಆಪ್ಷನ್ಸ್ ಮೇಲೆ ಮೆರಿಟ್ ಮತ್ತು ರೋಸ್ಟರ್ ಪ್ರಕಾರ ಸೀಟು ಹಂಚಿಕೆ ಮಾಡಲಾಗಿದೆ.
ಇದೇ ಅಂತಿಮ ಫಲಿತಾಂಶ ಅಲ್ಲ. ಅಭ್ಯರ್ಥಿಗಳು ಜುಲೈ 9ರಂದು ಬೆಳಿಗ್ಗೆ 10 ಗಂಟೆವರೆಗೆ ತಮ್ಮ ಇಚ್ಛೆ/ಆಯ್ಕೆಗಳನ್ನು ಹೊಸದಾಗಿ ದಾಖಲಿಸಲು/ಬದಲಿಸಿಕೊಳ್ಳಲು ಹಾಗೂ ತೆಗೆದುಹಾಕಲು/ಕ್ರಮಾಂಕ ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಜುಲೈ 14ರಂದು ಪ್ರಕಟಿಸಲಾಗುತ್ತದೆ. ಜುಲೈ 15ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ಇದುವರೆಗೂ ಇಚ್ಛೆ/ಆಯ್ಕೆ ದಾಖಲಿಸದೇ ಇರುವ ಅಭ್ಯರ್ಥಿಗಳು ₹750 ಪಾವತಿಸಿ, ಮಾಡಬಹುದು.
ಯೋಗ ಮತ್ತು ನ್ಯಾಚುರೋಪತಿ ಕೋರ್ಸ್ ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಸರ್ಕಾರದಿಂದ ಬಂದಿದ್ದು, ಅದರ ಆಧಾರದ ಮೇಲೆ ಇಚ್ಛೆ/ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

