ಕೇವಲ 16 ದಿನಗಳ ಕಾಲ ಕೆಲಸಕ್ಕಿದ್ದ ಮಹಿಳೆಯೊಬ್ಬಳು ಇಡೀ ಕುಟುಂಬಕ್ಕೆ ವಿಷಾಹಾರ ನೀಡಿ ದರೋಡೆ ಮಾಡಲು ಯತ್ನಿಸಿದ ಘಟನೆ ಪಟಿಯಾಲದಲ್ಲಿ ನಡೆದಿದೆ. ಮನೆಯ ಮಾಲೀಕರು ಬೆಂಗಳೂರಿನಲ್ಲಿದ್ದ ಕಾರಣ ತಾಂತ್ರಿಕತೆಯನ್ನು ಬಳಸಿಕೊಂಡು ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಿದ್ದಾರೆ.
ಮಗಳಂತೆ ಕಂಡವರೇ ಮಾಡಿದ್ರು ದ್ರೋಹ ನೇಪಾಳ ಮೂಲದ ಮನೀಶಾ ಎಂಬ ಮಹಿಳೆಯನ್ನು ಪಟಿಯಾಲದ ಕುಟುಂಬವೊಂದು ಮನೆಗೆಲಸಕ್ಕೆ ಸೇರಿಸಿಕೊಂಡಿತ್ತು. ಅವಳ ನಡವಳಿಕೆಯಿಂದ ಕುಟುಂಬಸ್ಥರು ಆಕೆಯನ್ನು ತಮ್ಮ ಮನೆಯ ಮಗಳಂತೆ ನಂಬಿದ್ದರು. ಆದರೆ ಇದೇ ನಂಬಿಕೆಯನ್ನು ಬಳಸಿಕೊಂಡ ಮನೀಶಾ, ಅಂದು ರಾತ್ರಿ ಊಟದಲ್ಲಿ ಮನೆಯವರಿಗೆ ನಿದ್ದೆ ಮಾತ್ರೆ ಬೆರೆಸಿದ್ದಾಳೆ. ಊಟ ಮಾಡಿದ ಕುಟುಂಬಸ್ಥರು ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆ ಹೊರಗಡೆ ಕಾಯುತ್ತಿದ್ದ ತನ್ನ ಮೂವರು ಸಹಚರರಿಗೆ ಸಿಗ್ನಲ್ ನೀಡಿದ್ದಾಳೆ. ದರೋಡೆಕೋರರು ಟೆರೇಸ್ ಮೂಲಕ ಮನೆಗೆ ನುಗ್ಗಿದ್ದನ್ನು ಸಿಸಿಟಿವಿ ಕ್ಯಾಮೆರಾಗಳು ಸೆರೆಹಿಡಿದಿವೆ.
ಬೆಂಗಳೂರಿನಿಂದ ಕಂಡ ದೃಶ್ಯ ಸುಮಾರು 800 ಮೈಲಿ ದೂರದ ಬೆಂಗಳೂರಿನಲ್ಲಿದ್ದ ಮನೆಯ ಯಜಮಾನ, ಅಭ್ಯಾಸದಂತೆ ಅಂದು ಮಧ್ಯರಾತ್ರಿ ಮನೆಯ ಸಿಸಿಟಿವಿ ಫೂಟೇಜ್ ಅನ್ನು ಮೊಬೈಲ್‌ನಲ್ಲಿ ಚೆಕ್ ಮಾಡಿದ್ದಾರೆ. ಈ ವೇಳೆ ಮನೆಯೊಳಗೆ ಅಪರಿಚಿತರು ಓಡಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ತನ್ನ ಪತ್ನಿಗೆ ಕರೆ ಮಾಡಿದ್ದಾರಾದರೂ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಕರೆ ಸ್ವೀಕರಿಸಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಕೂಡಲೇ ಪಟಿಯಾಲದಲ್ಲಿರುವ ತನ್ನ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಧಾವಿಸುವಂತೆ ಕೋರಿದ್ದಾರೆ.
ವಾರ್ನಿಂಗ್ ಶಾಟ್ ಮತ್ತು ಕಳ್ಳರ ಪರಾರಿ ಯಜಮಾನನ ಸೂಚನೆಯಂತೆ ತಕ್ಷಣ ಸ್ಥಳಕ್ಕೆ ಬಂದ ಸಂಬಂಧಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಶಬ್ದಕ್ಕೆ ಹೆದರಿದ ದರೋಡೆಕೋರರು ತಾವು ಲೂಟಿ ಮಾಡಿದ್ದನ್ನು ಬಿಟ್ಟು ಅಲ್ಲಿಂದ ಪಲಾಯನ ಮಾಡಿದ್ದಾರೆ. ಮರುದಿನ ಬೆಳಿಗ್ಗೆ ಎಚ್ಚರಗೊಂಡ ಕುಟುಂಬಸ್ಥರಿಗೆ ತಾವು ನಂಬಿದ್ದ ಮನೀಶಾ ತಮ್ಮ ಮನೆಯನ್ನೇ ಲೂಟಿ ಮಾಡಲು ಹೊಂಚು ಹಾಕಿದ್ದ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾರೆ.
ಪೊಲೀಸ್ ತನಿಖೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೀಶಾ ಮತ್ತು ಅವಳ ಸಹಚರರ ಮುಖಗಳು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಂಡರೂ ಇನ್ನು ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ. ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಅವರ ಹಿನ್ನೆಲೆ ಪರೀಕ್ಷಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.

