ಮಂಡ್ಯ: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಬಿಡಬೇಕು ಎಂಬ ಆದೇಶದ ವಿರುದ್ಧ ಕಾವೇರಿ ಕೊಳ್ಳ, ಮಂಡ್ಯ ಭಾಗದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಬಿಜೆಪಿ ನಾಯಕರು ಇಂದು ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಮತ್ತು ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿ (CWRC) 3,500 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಆದೇಶಿಸಿದ ನಂತರ ಮಂಡ್ಯದಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆಗಳನ್ನು ತೀವ್ರಗೊಳಿಸಿವೆ. ಈ ಆದೇಶದ ವಿರುದ್ಧ ಧ್ವನಿ ಎತ್ತಿರುವ ಬಿಜೆಪಿ ನಾಯಕರು, ಇಂದು ಬೆಳಗ್ಗೆ 11 ಗಂಟೆಗೆ ಕೆಆರ್ಎಸ್ ಜಲಾಶಯದ ಬಳಿ ಪ್ರತಿಭಟನೆ ಆರಂಭಿಸಿ, ನಂತರ ಅಣೆಕಟ್ಟಿಗೆ ಮುತ್ತಿಗೆ ಹಾಕಲಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಆರ್ಎಸ್ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಟ್ಟು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಎಸ್‌ಪಿ, ಒಂಬತ್ತು ಡಿವೈಎಸ್‌ಪಿ, ಇಪ್ಪತ್ತೇಳು ಇನ್ಸ್‌ಪೆಕ್ಟರ್‌ಗಳು, ನಲವತ್ತೈದು ಪಿಎಸ್‌ಐ ಮತ್ತು ಎಪ್ಪತ್ತೆಂಟು ಎಎಸ್‌ಐಗಳನ್ನು ಒಳಗೊಂಡಂತೆ ಭಾರಿ ಸಂಖ್ಯೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಮಾಹಿತಿ ನೀಡಿದ್ದಾರೆ.
ಕೆ.ಆರ್.ಎಸ್ ಜಲಾಶಯದ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೆಆರ್ಎಸ್ನ ಬೃಂದಾವನ ಉದ್ಯಾನವನಕ್ಕೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮತ್ತೊಂದೆಡೆ ಮಂಡ್ಯ ಜಿಲ್ಲಾದ್ಯಂತ ಕಾವೇರಿ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಕನ್ನಡಪರ ಸಂಘಟನೆಗಳು, ಬಿಜೆಪಿ ನಾಯಕರು, ವಿವಿಧ ರೈತ ಸಂಘಟನೆಗಳು ಮತ್ತು ಇತರ ವಿವಿಧ ಸಂಘಟನೆಗಳು ಕೂಡ ತಮಿಳುನಾಡಿಗೆ ನೀರು ಬಿಡುಗಡೆ ಮಾಡದಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿವೆ.

