HomeLatest Newsಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು ಕೊಡುವಂತೆ ಆದೇಶಿಸುವುದು ಎಷ್ಟು ಸರಿ?; ಡಿಸಿಎಂ ಪರಮೇಶ್ವರ್ ಆಕ್ರೋಶ

ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು ಕೊಡುವಂತೆ ಆದೇಶಿಸುವುದು ಎಷ್ಟು ಸರಿ?; ಡಿಸಿಎಂ ಪರಮೇಶ್ವರ್ ಆಕ್ರೋಶ

ಬೆಂಗಳೂರು: ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ 3,500 ಕ್ಯುಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಹೇಳುವುದು ಸರಿಯಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಇದ್ದಾಗ ನಾವು ಕೊಡುತ್ತೇವೆ. ಈಗ ಕುಡಿಯಲು ನೀರಿಲ್ಲ ಎಂಬ ಪರಿಸ್ಥಿತಿ ಇರುವಾಗ ಈ ಆದೇಶ ಸರಿಯಲ್ಲ ಎಂದು ಉಪ ಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಇಂದು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆಯನ್ನು ಕರೆಯುವುದಾಗಿ ಪ್ರಸ್ತಾಪಿಸಿದ್ದಾರೆ. ನೀರು ಇರುವಾಗ ನಾವು ಅವರು ಕೇಳದೆಯೇ ಕೊಡುತ್ತೇವೆ. ನಿಗದಿಗಿಂತ ಹೆಚ್ಚಿನ ನೀರನ್ನು ಕೊಟ್ಟಿದ್ದೇವೆ. ಈ ಬಾರಿ ನಮಗೆ ಕುಡಿಯುವುದಕ್ಕೆ ನೀರಿಲ್ಲ ಅನ್ನುವ ಪರಿಸ್ಥಿತಿ ಇರುವಾಗ 3,500 ಟಿಎಂಸಿ ನೀರನ್ನು ಕೊಡಬೇಕು ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಆಗಸ್ಟ್ 3ರಂದು ತಮಿಳುನಾಡು ಮುಖ್ಯಮಂತ್ರಿಗಳು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಅದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಅವರು ಬಂದರೆ, ಅವರ ಜೊತೆಗೂ ಈ ಬಗ್ಗೆ ಪ್ರಸ್ತಾಪಿಸುತ್ತೇವೆ. ಇಂದು ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಸಭೆ ನಡೆಸಿ ಒಂದು ನಿರ್ಧಾರವನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡಪರ ಸಂಘಟನೆಗಳ ಪ್ರತಿಭಟನೆ ಮತ್ತು ಮೇಕೆದಾಟು ವಿವಾದ

ಕಾವೇರಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಮಂಡ್ಯ ಮತ್ತು ಸುತ್ತಲಿನ ಭಾಗಗಳಲ್ಲಿ ರೈತ ಸಂಘಟನೆಗಳು, ಬೇರೆ ಬೇರೆ ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ಮಾಡುತ್ತಾರೆ. ನಿನ್ನೆ ಕೂಡ ಪ್ರತಿಭಟನೆ ಮಾಡಿದ್ದಾರೆ. ನೀರು ಇಲ್ಲ ಅನ್ನೋದು ಅವರಿಗೂ ಗೊತ್ತಿದೆ. ಸರ್ಕಾರ ಒಂದು ವೇಳೆ ಇರುವ ನೀರನ್ನು ಕೊಟ್ಟುಬಿಡಬಹುದು ಎಂಬ ಆತಂಕ ಅವರಿಗೆ ಇದೆ. ಹಾಗಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಹೇಳಿದರು.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿರುವ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕು ಇದೆ, ತಮಿಳುನಾಡಿನ ಸಮ್ಮತಿಯ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಪತ್ರ ಬರೆಯಲಿ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಪ್ರಧಾನ ಮಂತ್ರಿಗಳು ಕೋರ್ಟ್ಗಿಂತ ಮೇಲೆ ಇರುವುದಿಲ್ಲ. ಕೋರ್ಟ್ ನೀಡುವ ತೀರ್ಮಾನವೇ ಅಂತಿಮ ಎಂದರು.

ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಜಯ್ ಅವರು ರಾಜ್ಯಕ್ಕೆ ಬರುತ್ತಿರುವುದಕ್ಕೆ ಬಿಜೆಪಿಯವರು ವಿರೋಧಿಸುತ್ತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎರಡು ರಾಜ್ಯದಲ್ಲೂ ಸಮಸ್ಯೆಗಳು ಇರುತ್ತವೆ. ಅದನ್ನು ನಾವು ಸೇರಿ ಬಗೆಹರಿಸುತ್ತೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದೆಲ್ಲವೂ ಸಾಮಾನ್ಯ. ಇತ್ತೀಚೆಗೆ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾದ ಗೇಟುಗಳ ಲೋಕಾರ್ಪಣೆ ಸಮಾರಂಭಕ್ಕೆ ಚಂದ್ರಬಾಬು ನಾಯ್ದು, ರೇವಂತ್ ರೆಡ್ಡಿ ಅವರು ಬಂದಿದ್ದರು. ನಮ್ಮ ಮುಖ್ಯಮಂತ್ರಿಗಳೂ ಇದ್ದರು. ನದಿ ಜೋಡಣೆ, ನೀರಿನ ಹಂಚಿಕೆಯ ಬಗ್ಗೆ ಅವರು ಪ್ರಸ್ತಾಪಿಸಿ, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಮಾತನಾಡಿಕೊಂಡಿದ್ದಾರೆ. ಇನ್ನೊಂದು ಜಲಾಶಯ ಕಟ್ಟುವ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ 90% ಕೇಂದ್ರ ಕೊಡುತ್ತದೆ, 10% ರಾಜ್ಯ ಕೊಡಬೇಕು ಎಂದು ಕೇಂದ್ರ ನೀರಾವರಿ ಸಚಿವರು ಅದೇ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗೆ ಅಕ್ಕಪಕ್ಕದ ರಾಜ್ಯಗಳು ಸಮಸ್ಯೆಗಳನ್ನು ಮಾತಾಡಿಕೊಂಡು ಬಗೆಹರಿಸುವುದಾದರೆ, ಇದಕ್ಕೆ ಬಿಜೆಪಿ ಯಾಕೆ ಆಕ್ಷೇಪಿಸುತ್ತಿದೆ? ಅವರು ಹೇಳೋ ಪ್ರಕಾರ ರಾಜ್ಯಗಳು ಜಗಳ ಆಡಿಕೊಂಡೇ ಇರಬೇಕಾ? ಬಹುಶಃ ಹೊಂದಾಣಿಕೆಯಲ್ಲಿ ಹೋಗಬಾರದು ಅನ್ನೋದು ಬಿಜೆಪಿಯ ನೀತಿ ಇರಬೇಕು ಎಂದು ಹೇಳಿದರು.

ಬರ ಪರಿಸ್ಥಿತಿ: ಕೇಂದ್ರಕ್ಕೆ ವರದಿ ಸಲ್ಲಿಕೆ

ಇನ್ನೂ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಆಗಸ್ಟ್ ತಿಂಗಳ ಕೊನೆಯವರೆಗೂ ಮಳೆ ಪರಿಸ್ಥಿತಿಯನ್ನು ಅವಲೋಕಿಸಿ, ಬಳಿಕ ಮತ್ತೊಮ್ಮೆ ವರದಿಯನ್ನು ಸಲ್ಲಿಸುತ್ತೇವೆ. ಸಾಮಾನ್ಯವಾಗಿ ವರದಿಯನ್ನು ಆಗಸ್ಟ್ನಲ್ಲಿ ಸಲ್ಲಿಸಿದ ನಂತರ, ಸೆಪ್ಟೆಂಬರ್ನಲ್ಲಿ ಕೇಂದ್ರದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ಆ ಬಳಿಕ ನಾವು ಕೇಳಿರುವ ನೆರವಿನ ಮೊತ್ತವನ್ನು ಪರಿಶೀಲಿಸಿ, ಎಷ್ಟು ಅನುದಾನ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿನ ಪ್ರಸ್ತುತ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಬರಪೀಡಿತ ಪ್ರದೇಶಗಳನ್ನು ಪ್ರಕೃತಿ ವಿಕೋಪದಡಿ ಘೋಷಿಸುವಂತೆ ಮನವಿ ಮಾಡಲಾಗಿದೆ. ಬರ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕೆಲವು ಮಾನದಂಡಗಳನ್ನು ಸಡಿಲಗೊಳಿಸುವಂತೆ ಕೋರಿದ್ದೇವೆ. ಪ್ರಸ್ತುತ ಜಾರಿಯಲ್ಲಿರುವ ಮಾನದಂಡಗಳ ಕಾರಣ, ಶೇ.80ರವರೆಗೆ ಮಳೆ ಕೊರತೆ ಎದುರಿಸುತ್ತಿರುವ ಕೆಲವು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾನದಂಡಗಳನ್ನು ಸಡಿಲಗೊಳಿಸುವಂತೆ ಹೇಳಿದ್ದೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಚರ್ಚೆ

ಸಚಿವ ಸಂಪುಟ ವಿಸ್ತರಣೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ವಿಷಯದ ಕುರಿತು ರಾಹುಲ್ ಗಾಂಧಿಯವರು, ಎಐಸಿಸಿ ಅಧ್ಯಕ್ಷರು, ರಾಜ್ಯ ಉಸ್ತುವಾರಿಗಳು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮುಂದುವರೆದು, ರಾಹುಲ್ ಗಾಂಧಿಯವರು ವಿದೇಶ ಪ್ರವಾಸದಲ್ಲಿದ್ದ ಕಾರಣ ಚರ್ಚೆಗೆ ಅವಕಾಶ ಸಿಕ್ಕಿರಲಿಲ್ಲ. ಅಧಿವೇಶನ ನಡೆಯುತ್ತಿರುವುದರಿಂದ ಹೆಚ್ಚಿನ ಆದ್ಯತೆ ಅದಕ್ಕೆಯೇ ನೀಡಬೇಕಾಗುತ್ತದೆ ಎಂದರು.

ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕದ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular