ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಪ್ರಿಯಕರನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಮಗುವಿನ ಅಳು ತೊಂದರೆ ಉಂಟುಮಾಡಿದ್ದರಿಂದ ತಾಯಿ ತನ್ನ ಮೂರು ವರ್ಷದ ಮಗನ ಕುತ್ತಿಗೆ ಹಿಸುಕಿ ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಘಟನೆ ನಡೆದ ಸುಮಾರು ಒಂದು ತಿಂಗಳ ಬಳಿಕ ಮಹಿಳೆ ತನ್ನ ಪತಿಗೆ ಸತ್ಯ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜುಲೈ 27ರಂದು ಸಂಜೆ 7.30ರ ಸುಮಾರಿಗೆ ಡಯಲ್-112ಗೆ ಗೋವಿಂದ್ ಗುಪ್ತಾ ಎಂಬುವರು ಕರೆ ಮಾಡಿ, ತಮ್ಮ ಸಹೋದರನ ಪತ್ನಿ ಮೂರು ವರ್ಷದ ಮಗುವನ್ನು ಕುತ್ತಿಗೆ ಹಿಸುಕಿ ಕೊಂದಿರುವುದಾಗಿ ಮಾಹಿತಿ ನೀಡಿದರು.ಪ್ರಾಥಮಿಕ ತನಿಖೆಯಲ್ಲಿ, ಈ ಘಟನೆ ಜೂನ್ 28, 2026ರಂದು ಬಲದೇವ್ ಪೊಲೀಸ್ ಠಾಣೆ ವ್ಯಾಪ್ತಿಯ ಚೌಲಿ ಗ್ರಾಮದಲ್ಲಿ ನಡೆದಿರುವುದು ಗೊತ್ತಾಗಿದೆ. ಮೃತ ಬಾಲಕನನ್ನು ಮಾಧವ್ ಎಂದು ಗುರುತಿಸಲಾಗಿದೆ.
ಮಗು ಸಾವಿನ ಬಳಿಕ ಅಂತ್ಯಕ್ರಿಯೆ
ತನಿಖೆಯ ಪ್ರಕಾರ, ಮಗು ಆಟವಾಡುತ್ತಾ ಗದ್ದಲ ಮಾಡುತ್ತಿದ್ದ ವೇಳೆ ತಾಯಿ ರೂಚಿ ಗುಪ್ತಾ ಆತನನ್ನು ಗದರಿಸಿದ್ದಾಳೆ. ಈ ವೇಳೆ ಮಗುವಿಗೆ ಹಲ್ಲೆ ನಡೆಸಿ ಕುತ್ತಿಗೆ ಒತ್ತಿದ ಪರಿಣಾಮ ಮಗು ಮೃತಪಟ್ಟಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ನಂತರ ಮಗು ಎಚ್ಚರವಾಗುತ್ತಿಲ್ಲ, ಮಲಗಿರುವಂತೆ ಕಾಣುತ್ತಿದೆ ಎಂದು ಪತಿಗೆ ತಿಳಿಸಿದ್ದಾಳೆ. ತಕ್ಷಣ ಮಗುವನ್ನು ಪತಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದರು. ಸಾವಿನ ಹಿಂದಿನ ನಿಜಾಂಶ ತಿಳಿಯದ ಕುಟುಂಬಸ್ಥರು ಮಗುವಿನ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.
ತಿಂಗಳ ಬಳಿಕ ಪತಿಗೆ ಸತ್ಯ ಒಪ್ಪಿಕೊಂಡ ಆರೋಪಿ
ಘಟನೆ ನಡೆದ ಸುಮಾರು ಒಂದು ತಿಂಗಳ ಬಳಿಕ ರೂಚಿ ಗುಪ್ತಾ, ಮಗುವಿನ ಕುತ್ತಿಗೆ ಒತ್ತಿದ ಕಾರಣವೇ ಅದು ಮೃತಪಟ್ಟಿತ್ತು ಎಂದು ಪತಿಗೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.ಇದಾದ ಬಳಿಕ ಕುಟುಂಬದವರು ಬಲದೇವ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ಸಂಬಂಧಿತ ಕಾನೂನು ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ತನಿಖೆ ಮುಂದುವರಿಕೆ
ದೂರು ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಸಾವು ಉದ್ದೇಶಪೂರ್ವಕವಾಗಿತ್ತೇ ಅಥವಾ ಆಕಸ್ಮಿಕವಾಗಿತ್ತೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು, ಪ್ರಕರಣದ ನಿಖರ ಸತ್ಯ ತನಿಖೆಯ ನಂತರವೇ ಬಹಿರಂಗವಾಗಲಿದೆ ಎಂದು ಮಥುರಾ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

