ಮಂಗಳೂರು: ಯುವಕರಿಬ್ಬರಿಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ಸೂಚನೆಯಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಮಂಗಳೂರಿನ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
2024ರ ಅಕ್ಟೋಬರ್ 9ರಂದು ತನುಶ್ ಶೆಟ್ಟಿ ಮತ್ತು ಸ್ನೇಹಿತ ಅಂಕಿತ್ ಅವರು ಬಜ್ಪೆಯಿಂದ ಕದ್ರಿಗೆ ಬರುವಾಗ ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಜಿತೇಂದ್ರ ಕೊಟ್ಟಾರಿ ಜೊತೆ ಮಾತುಕತೆ ನಡೆದಿತ್ತು. ನಂತರ ಬೆನ್ನಟ್ಟಿ ಜಿತೇಂದ್ರ ಕೊಟ್ಟಾರಿ ಅವರ ಮನೆಯ ಕಾಂಪೌಂಡ್ ಒಳಗೆ ತೆರಳಿದ್ದು, ಮೂವರ ನಡುವೆ ಭಾರಿ ವಾಗ್ವಾದ ನಡೆದಿತ್ತು. ಜಿತೇಂದ್ರ ಕೊಟ್ಟಾರಿ ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂಕಿತ್ ಮತ್ತು ತನುಷ್ ಅವರನ್ನು ಪೊಲೀಸರು ಬಂಧಿಸಿದ್ದರು.
ಜೈಲಿನಿಂದ ಬಿಡುಗಡೆಯಾದ ನಂತರ ಯುವಕರು ತಾವೇನೂ ಹಲ್ಲೆ ಮಾಡಿಲ್ಲ. ತಮಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಕೊಟ್ಟಾರಿ ಅವರ ಪುತ್ರಿ ನಮ್ಮ ಮೇಲೆ ಶೂಟ್ ಮಾಡುವಂತೆ ತಂದೆಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿ ಪ್ರತಿ ದೂರು ನೀಡಿದ್ದರು. ದೂರು ದಾಖಲಿಸಿ ತನಿಖೆ ನಡೆಸುವಂತೆ ಒಂದು ವರ್ಷದ ನಂತರ ನ್ಯಾಯಾಲಯ ಸೂಚನೆ ನೀಡಿದ್ದು, ಬರ್ಕೆ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

