ಮಂಗಳೂರು: ಕೆಲ ದಿನಗಳ ಹಿಂದೆ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಯ ಮಾಡಿಕೊಂಡು ಯುವತಿಯರನ್ನು ನಂಬಿಸಿ ಮದುವೆಯಾಗಿ ಅವರಿಂದ ಹಣ ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆ ಘಟನೆ ಮಾಶುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ನಡೆದಿದೆ.
ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ವ್ಯಕ್ತಿಯೊಬ್ಬ ಮದುವೆಯಾಗಿದ್ದರೂ ಯುವತುಯರ ಹಿಂದೆ ಬಿದ್ದಿದ್ದ. ಪತಿಯ ಹುಚ್ಚಾಟಕ್ಕೆ ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆ ಪ್ರೀತಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಮನೀಶ್, ಬ್ಲ್ಯಾಕ್ಮೇಲ್ ಮಾಡಿ ಆಕೆಯನ್ನು ಮದುವೆ ಆಗಿದ್ದನಂತೆ.
ಮದುವೆಗೆ ಮೂರು ದಿನ ಇರುವಾಗ ಹಣ ಇಲ್ಲ ಎಂದು ಆತ್ಮಹತ್ಯೆ ನಾಟಕವಾಡಿದ್ದ. ಹೀಗಾಗಿ ಮದುವೆಯ ಎಲ್ಲ ಖರ್ಚನ್ನು ತಾವೇ ನೋಡಿಕೊಂಡು ಪ್ರೀತಿ ಪೋಷಕರು ವಿವಾಹ ಕಾರ್ಯ ನಡೆಸಿದ್ದರು. ಮದುವೆಯಾದ ಬಳಿಕ ಎರಡು ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್ಗೆ ಕೆಲಸ ಕೊಡಿಸಲು ಕೂಡ ಪ್ರೀತಿ ಸಹಾಯ ಮಾಡಿದ್ದರು. ಆದರೆ ದುಬೈಗೆ ಹೋದ ಈತ ಬಹರೇನ್ನಲ್ಲಿರೋ ಮಹಿಳೆ ಜೊತೆ ಪ್ರೀತಿ-ಪ್ರೇಮ ಎಂದು ಸುತ್ತಾಟವಾಡಿದ್ದಾನೆ. ವಿಚಾರ ತಿಳಿದು ಪತಿಯ ಇತಿಹಾಸವನ್ನು ಪರಿಶೀಲಿಸಿದಾಗ ಆತನ ಬಗ್ಗೆ ಇನ್ನಷ್ಟು ಆಘಾತಕಾರಿ ಮಾಹಿತಿಗಾಳು ಬಯಲಾಗಿವೆ.
ಪ್ರೀತಿ ಜೊತೆ ಮದುವೆಗೂ ಮುನ್ನ ಮನೀಶ್ ಹಲವು ಯುವತಿಯರ ಜೊತೆ ಅಫೇರ್ ಹೊಂದಿದ್ದ. ಅವರ ಬಳಿಯೂ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನು ಆ ಯುವತಿಯರೇ ಪ್ರೀತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಣ ವಾಪಾಸ್ ಕೇಳಿದ್ದಕ್ಕೆ ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದನಂತೆ.
ಟಿಕ್ ಟಾಕ್ ಮೂಲಕ ಯುವತಿಯರಿಗೆ ಗಾಳ ಮನೀಶ್ ಗಾಳ ಹಾಕುತ್ತಾನಂತೆ. ಪತಿಯ ನಡೆಗೆ ಬೇಸತ್ತ ಪತ್ನಿ ಪ್ರೀತಿ, ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

