ಬೆಂಗಳೂರು: ಗರ್ಭಿಣಿ ಫೋಟೋ ಶೂಟ್ ವೇಳೆ ಆಟವಾಡುತ್ತಿದ್ದ ಮೊದಲ ಮಗು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಿಡ್ಡೇನಹಳ್ಳಿಯಲ್ಲಿ ನಡೆದಿದೆ.
ಎಂಟು ತಿಂಗಳ ಗರ್ಭಿಣಿ ಫೋಟೋ ಶೂಟ್ ಮಾಡುವ ವೇಳೆ ಘಟನೆ ನಡೆದಿದೆ. ಆಟವಾಡುತ್ತಿದ್ದ ಮೂರು ವರ್ಷದ ಮಗು ಲಕ್ಷ್ಮಿರ್ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ದಂಪತಿ ಫೋಟೋಶೂಟ್ ಮಾಡಿಸುತ್ತಿದ್ದ ವೇಳೆ ಮಗು ಸಮೀಪದಲ್ಲೇ ಆಟವಾಡಿಕೊಂಡಿತ್ತು. ಆದರೆ, ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ.
ಮಗುವಿನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಾದನಾಯಕನಹಳ್ಳಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

