ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಆದಾಯ ತೆರಿಗೆ ಶೋಧ ಕಾರ್ಯಾಚರಣೆ ವೇಳೆ ನಡೆದ ಈ ದುರಂತ ಘಟನೆ ದೇಶದ ತೆರಿಗೆ ಆಡಳಿತದ ಮೇಲೆ ಕಪ್ಪು ಚುಕ್ಕೆಯಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ನಿಷ್ಪಕ್ಷಪಾತ ತನಿಖೆ ಅನಿವಾರ್ಯ ಎಂದು ಒತ್ತಾಯಿಸಿದ್ದಾರೆ.
ಜನವರಿ 30, 2026ರಂದು ಆದಾಯ ತೆರಿಗೆ ಐದಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದ ವೇಳೆಯೇ ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ. ರಾಯ್ ಅಸಹಜ ಸಾವಿನ ಬಗ್ಗೆ ಕೇರಳದ ಜನತೆಯ ದು:ಖ ಹಂಚಿಕೊಳ್ಳಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘಟನೆಯಿಂದ ಉದ್ಯಮ ಸಮುದಾಯ ಮತ್ತು ನಾಗರಿಕ ಸಮಾಜ ಆಘಾತಕ್ಕೊಳಗಾಗಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಐಟಿ ಅಧಿಕಾರಗಳ ಶೋಧ ಕಾರ್ಯಾಚರಣೆ ವೇಳೆಯೇ ವ್ಯಕ್ತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ. ಇಂತಹ ಕಾರ್ಯಾಚರಣೆ ವ್ವೇಳೆ ಆ ಸ್ಥಳ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿರಬೇಕು ಮತ್ತು ಪರಿಶೀಲನೆ ಸುರಕ್ಷಿತವಾಗಿರಬೇಕು. ಯಾವುದೇ ಶೋಧ ಕಾರ್ಯಾಚರಣೆಯಲ್ಲಿ, ಸರ್ಚ್ ವಾರಂಟ್ ಹೊರಡಿಸಲಾದ ವ್ಯಕ್ತಿಯು ಅಧಿಕಾರಿಗಳು ಶೋಧ ನಡೆಸುತ್ತಿರುವ ಸ್ಥಳದಲ್ಲಿ ಹಾಜರಿರಬೇಕು. ಸ್ಥಾಪಿತ ಕಾರ್ಯವಿಧಾನಗಳ ಪ್ರಕಾರ ಕನಿಷ್ಠ ಇಬ್ಬರು ಸ್ವತಂತ್ರ ಸಾಕ್ಷಿಗಳು ಇರಬೇಕು. ಈ ಪ್ರಕರಣದಲ್ಲಿ ವರದಿಗಳ ಪ್ರಕಾರ ಐಟಿ ಶೋಧ ನಡೆಯುತ್ತಿರುವಾಗಲೇ ಸಿ.ಜೆ.ರಾಯ್ ಮತ್ತೊಂದು ರೋಮಿಗೆ ಹೋಗಿ ಪರವಾನಗಿ ಪಡೆದ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಇದೊಂದು ಗಂಭೀರ ಲೋಪವಾಗಿದೆ. ಸಿ.ಜೆ.ರಾಯ್ ಅವರ ಸಹೋದರ ಅಧಿಕಾರಿಗಳಿಂದ ಕಿರುಕುಳ ನಡೆದಿದೆ ಎಂದು ಗಂಭೀರ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಸಹಜವಾಗಿಯೇ ಆದಾಯ ತೆರಿಗೆ ಇಲಾಖೆಯೂ ತನ್ನ ಹೇಳಿಕೆಯನ್ನು ನೀಡುತ್ತದೆ. ಈ ಘಟನೆಯ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಹಾಗೂ ಕಾಲಮಿತಿಯೊಳಗೆ ಸಮಗ್ರ ವರದಿ ಬರಬೇಕು ಎಂದು ಒತ್ತಾಯಿಸಿದ್ದಾರೆ.

