ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಊಟ, ಉಪಹಾರ ದೊರೆಯುವುದಿಲ್ಲ ಎಂದು ಆರೋಪಿಸುವ ಜನರು ಹೆಚ್ಚು. ಆದರೆ ಈಗ ಸರ್ಕಾರ ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ಪೂರೈಕೆ ನಮ್ಮ ಆದ್ಯತೆ ಎಂದು ಹೇಳಿದ್ದು, ಹೊಸ ಘೋಷಣೆ ಮಾಡಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ನಮ್ಮ ಸರ್ಕಾರದ ಪ್ರಮುಖ ಆಶಯವಾದ ‘ಸಶಕ್ತ ಮತ್ತು ಆರೋಗ್ಯವಂತ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅತ್ಯುತ್ತಮ ದರ್ಜೆಯ ಆಹಾರವನ್ನು ಒದಗಿಸುವ ಉದ್ದೇಶದಿಂದ ಇಸ್ಕಾನ್ (ISKCON) ಸಂಸ್ಥೆಯ ಮೂಲಕ ಪೌಷ್ಟಿಕ ಆಹಾರ ಪೂರೈಸಲು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ಬೆಂಗಳೂರಿನ ಯಲಹಂಕ, ಕೆ.ಆರ್. ಪುರ ಮತ್ತು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈ ಸುಧಾರಿತ ಆಹಾರ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ವಿವರಿಸಿದ್ದಾರೆ.
* ರೋಗಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಜನರಲ್ ಡಯಟ್, ಥೆರಪಿಟಿಕ್ ಡಯಟ್, ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ವಿಶೇಷ ಆಹಾರ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಪೌಷ್ಟಿಕ ಆಹಾರವನ್ನು ನೀಡಲಾಗುವುದು.
* ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಸರಾಗಿರುವ ಇಸ್ಕಾನ್ ಸಂಸ್ಥೆಯ ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತಿದ್ದು, ಇದಕ್ಕಾಗಿ ರೂ. 2,83,47,000 ಅನುದಾನವನ್ನು ಮೀಸಲಿಡಲಾಗಿದೆ.
* ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಸೇರಿದಂತೆ ದಿನದ ವಿವಿಧ ಅವಧಿಗಳಲ್ಲಿ ಸಮತೋಲಿತ ಆಹಾರವನ್ನು ವೈಜ್ಞಾನಿಕ ದರ ಪಟ್ಟಿಯ ಆಧಾರದ ಮೇಲೆ ಪೂರೈಸಲಾಗುವುದು.
ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಗುಣಮಟ್ಟದ ಚಿಕಿತ್ಸೆಯ ಜೊತೆಗೆ ಶಕ್ತಿವರ್ಧಕ ಆಹಾರ ಸಿಗುವಂತೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಆಹಾರದ ದರಪಟ್ಟಿ: ಇಸ್ಕಾನ್ ಮೂಲಕ ಪೂರೈಕೆ ಮಾಡುವ ಪೌಷ್ಟಿಕ ಆಹಾರಕ್ಕೆ ಎಷ್ಟು ದರ ಪಾವತಿ ಮಾಡಬೇಕು ಎಂದು ದರಪಟ್ಟಿಯನ್ನು ಪ್ರಕಟಿಸಲಾಗಿದೆ.


