HomeLatest Newsಬಳ್ಳಾರಿ ಘಟನೆ ಸರ್ಕಾರಿ ಪ್ರಾಯೋಜಕತ್ವದ ಪೂರ್ವ ನಿಯೋಜಿತ ದುಷ್ಕೃತ್ಯ

ಬಳ್ಳಾರಿ ಘಟನೆ ಸರ್ಕಾರಿ ಪ್ರಾಯೋಜಕತ್ವದ ಪೂರ್ವ ನಿಯೋಜಿತ ದುಷ್ಕೃತ್ಯ

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಬೆಂಬಲಿಗನೊಬ್ಬ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.

ಘಟನೆ ಕುರಿತು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಎಂ.ಎ. ಸಲೀಂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದಾರೆ. ಕಠಿಣ ಕ್ರಮವನ್ನು ಕೈಗೊಳ್ಳಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಈ ಘಟನೆ ಈಗ ತೀವ್ರವಾದ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಿ ಪ್ರಾಯೋಜಕತ್ವ: ಬಿ.ವೈ.ವಿಜಯೇಂದ್ರ ತಮ್ಮ ಪೋಸ್ಟ್‌ನಲ್ಲಿ, ‘ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಎದುರು ನಡೆದಿರುವ ನಿನ್ನೆಯ ಘಟನೆ ಕಾಂಗ್ರೆಸ್ ‌ ಗೂಂಡಾಗಳು ನಡೆಸಿದ ಸರ್ಕಾರಿ ಪ್ರಾಯೋಜಕತ್ವದ ಪೂರ್ವ ನಿಯೋಜಿತ ದುಷ್ಕೃತ್ಯವಾಗಿದೆ, ಸದರಿ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುವೆ’ ಎಂದು ಹೇಳಿದ್ದಾರೆ.

‘ಜನಾರ್ಧನ ರೆಡ್ಡಿ ಮತ್ತವರ ಕುಟುಂಬವನ್ನು ಗುರಿಯನ್ನಾಗಿಸಿಕೊಂಡು ನಡೆದಿರುವ ಈ ಘಟನೆಗೆ ಮಹರ್ಷಿ ವಾಲ್ಮೀಕಿ ಪ್ರತಿಮೆಯ ಉದ್ಘಾಟನೆಯ ಕಾರ್ಯಕ್ರಮದ ಬ್ಯಾನರ್‌ ಅಳವಡಿಸುವುದನ್ನು ನೆಪವಾಗಿಸಿಕೊಳ್ಳಲಾಗಿದೆ. ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿಲ್ಲ. ನಾಗರಿಕ ಸಮಾಜ ನೆಮ್ಮದಿಯಾಗಿ ಬದುಕುವ ವಾತಾವರಣವನ್ನು ವಿಚಲಿತಗೊಳಿಸಿ, ಭಯಗ್ರಸ್ಥ ನಗರವನ್ನಾಗಿಸಲು ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ದುಷ್ಕೃತ್ಯಕ್ಕೆ ಇಳಿದಂತಿದೆ’ ತಿಳಿಸಿದ್ದಾರೆ.

‘ಜನಾರ್ದನ ರೆಡ್ಡಿಯವರು ಬಿಜೆಪಿಗೆ ಮರು ಸೇರ್ಪಡೆಯಾದನಂತರ ಸ್ಥಳೀಯವಾಗಿ ಪಕ್ಷಸಂಘಟನೆ ಪ್ರಬಲವಾಗುತ್ತಿರುವುದು, Gali Janardhan Reddy ಮತ್ತು B Sriramulu ಅವರ ನಡುವಿನ ಬಾಂಧವ್ಯ ಹಿಂದಿನಂತೆ ಬೆಸೆದಿರುವುದು ರಾಜಕೀಯ ದುಷ್ಟರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ವಿಪರ್ಯಾಸವೆಂದರೆ ಸ್ಥಳೀಯ ಪೊಲೀಸ್‌ ಠಾಣೆಗಳು Indian National Congress – Karnataka ‌ಕಛೇರಿಗಳಾಗಿ ಮಾರ್ಪಟ್ಟಿವೆ. ಸ್ಥಳೀಯ ಪೊಲೀಸರು ಕಾಂಗ್ರೆಸ್ ‌ ಕೈಗೊಂಬೆಯಾಗಿದ್ದಾರೆ, ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಈ ದುಷ್ಕೃತ್ಯವನ್ನು ತಡೆಯಬಹುದಿತ್ತು’ ಎಂದು ಬಿ.ವೈ.ವಿಜಯೇಂದ್ರ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಈ ಕೂಡಲೇ ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಅವರು ಸೇರಿದಂತೆ ನಮ್ಮ ಪಕ್ಷದ ಪ್ರಮುಖರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸುವೆ. ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ’ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಬಳ್ಳಾರಿಯಲ್ಲಿ ಆಗಿದ್ದೇನು?:  ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಘಟನೆ ಬಳ್ಳಾರಿಯಲ್ಲಿ ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ನಡೆದಿದೆ.

ಜನವರಿ 3ರಂದು ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆ ಬಳ್ಳಾರಿ ನಗರದಾದ್ಯಂತ ಬ್ಯಾನರ್‌ ಅಳವಡಿಸಲಾಗುತ್ತಿದೆ. ಜನಾರ್ದನ ರೆಡ್ಡಿ ನಿವಾಸದೆದುರು ಬ್ಯಾನರ್ ಅಳವಡಿಸುವುದನ್ನು ಅವರ ಬೆಂಬಲಿಗರು ವಿರೋಧಿಸಿದ್ದಾರೆ.

ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಶಾಸಕ ನಾರಾ ಭರತ್‌ ರೆಡ್ಡಿ ಬೆಂಬಲಿಗರ ನಡುವೆ ಸಂಘರ್ಷ ನಡೆದುಹೋಗಿದೆ. ಜನಾರ್ದನ ರೆಡ್ಡಿ ಖಾಸಗಿ ಭದ್ರತಾ ಪಡೆ, ನಾರಾ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಭದ್ರತಾ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿವೆ. ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. 

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular