ನವದೆಹಲಿ: ಸಮಾಲೋಚನೆಯ ನಂತರ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಸರ್ಕಾರ ಗಮನಹರಿಸಲಿದೆ.
ಸಂಬಂಧಿತ ಇಲಾಖೆ ಮತ್ತು ನಿಯಂತ್ರಕರೊಂದಿಗೆ ಸಮಾಲೋಚಿಸಿದ ನಂತರ ಸಾರ್ವಜನಿಕ ವಲಯದ ಬ್ಯಾಂಕ್‌ಗಳ(ಪಿಎಸ್‌ಬಿ) ಖಾಸಗೀಕರಣದ ಬಗ್ಗೆ ಗಮನ ಹರಿಸುವುದಾಗಿ ಸರ್ಕಾರ ಸೋಮವಾರ ಹೇಳಿದೆ.
ಲೋಕಸಭೆಗೆ ಲಿಖಿತ ಉತ್ತರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಅವರು, ಹೂಡಿಕೆ ಹಿಂತೆಗೆದುಕೊಳ್ಳುವಿಕೆಗೆ ಸಂಬಂಧಿಸಿದ ವಿಷಯಗಳ ಪರಿಗಣನೆ ಮತ್ತು ಕಾರ್ಯತಂತ್ರದ ಮಾರಾಟದ ಸಂದರ್ಭದಲ್ಲಿ ಆಯ್ಕೆ, ನಿಯಮಗಳು ಮತ್ತು ಷರತ್ತುಗಳು ಇತ್ಯಾದಿಗಳ ನಿರ್ಧಾರವನ್ನು ಈ ಉದ್ದೇಶಕ್ಕಾಗಿ ಗೊತ್ತುಪಡಿಸಿದ ಕ್ಯಾಬಿನೆಟ್ ಸಮಿತಿಗೆ ವಹಿಸಲಾಗಿದೆ ಎಂದು ಹೇಳಿದರು.
2021-22ರ ಹಣಕಾಸು ವರ್ಷದ(ಎಫ್‌ವೈ) ಕೇಂದ್ರ ಬಜೆಟ್‌ನಲ್ಲಿ, ಎರಡು ಪಿಎಸ್‌ಬಿಗಳ ಖಾಸಗೀಕರಣ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ(ಪಿಎಸ್‌ಇ) ಕಾರ್ಯತಂತ್ರದ ಹೂಡಿಕೆಯ ನೀತಿಯ ಅನುಮೋದನೆಯನ್ನು ತೆಗೆದುಕೊಳ್ಳುವ ಸರ್ಕಾರದ ಉದ್ದೇಶವನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಖಾಸಗಿ ಬಂಡವಾಳದ ಮೂಲಕ ಸಾರ್ವಜನಿಕ ವಲಯದ ಉದ್ಯಮಗಳ ಬೆಳವಣಿಗೆಯನ್ನು ಸಕ್ರಿಯಗೊಳಿಸುವುದು, ಆ ಮೂಲಕ ಆರ್ಥಿಕ ಬೆಳವಣಿಗೆ, ಹೊಸ ಉದ್ಯೋಗಗಳಿಗೆ ಕೊಡುಗೆ ನೀಡುವುದು, ಸಾಮಾಜಿಕ ಕ್ಷೇತ್ರ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದು ನೀತಿಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.