ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶಾಕ್ ನೀಡಿದ್ದಾರೆ ಎನ್ನಲಾಗಿದ್ದು, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಿನ ಜಾವ ಎರಡು ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳ ತಂಡ, ಸಚಿವರ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಮನೆಯಲ್ಲಿ ಲಭ್ಯವಿರುವ ವಿವಿಧ ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ
ಸತೀಶ್ ಜಾರಕಿಹೊಳಿ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ದಾಳಿಯ ವೇಳೆ ಅಧಿಕಾರಿಗಳು ದಾಖಲೆಗಳು ಮತ್ತು ಇತರೆ ಪ್ರಮುಖ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.
ದಾಳಿ ಯಾವ ಪ್ರಕರಣಕ್ಕೆ ಸಂಬಂಧಿಸಿದೆ, ಯಾವ ದಾಖಲೆಗಳಿಗಾಗಿ ಶೋಧ ನಡೆಸಲಾಗುತ್ತಿದೆ ಮತ್ತು ಏನೆಲ್ಲಾ ವಸ್ತುಗಳು ಅಧಿಕಾರಿಗಳ ಕೈಗೆ ಸಿಕ್ಕಿವೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.ಇಡಿ ದಾಳಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಕುರಿತು ಅಧಿಕಾರಿಗಳ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ. ದಾಳಿ ಯಾವ ಪ್ರಕರಣಕ್ಕೆ ಸಂಬಂಧಿಸಿದೆ ಹಾಗೂ ಅಧಿಕಾರಿಗಳು ಯಾವ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ಕುರಿತು ಇಡಿ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಬಾಮೈದನ ಮನೆ ಮೇಲೆ ಇತ್ತೀಚೆಗೆ ದಾಳಿ
ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ED) ಶಾಕ್ ನೀಡಿತ್ತು. ಅಕ್ರಮ ಆಸ್ತಿ ಗಳಿಕೆ ಹಾಗೂ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಮಂಜುನಾಥ್ ಅವರ ನಿವಾಸಗಳು ಹಾಗೂ ಸಂಬಂಧಿತ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ಜೂ.24 ರಂದು ಏಕಕಾಲದಲ್ಲಿ ದಾಳಿ ನಡೆಸಿದ್ದರು.
ಮೈಸೂರಿನ ಕುವೆಂಪುನಗರದಲ್ಲಿರುವ ಮಂಜುನಾಥ್ ಅವರ ಮನೆ, ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿಯಿರುವ ನಿವಾಸ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಅವರ ಎರಡು ಮನೆಗಳ ಮೇಲೂ ದಾಳಿ ನಡೆದಿತ್ತು. ವೈ. ಮಂಜುನಾಥ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮವಾಗಿ ಬಾರ್‌ಗಳ ಮಾಲೀಕತ್ವ ಹೊಂದಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿತ್ತು.
ಜನರ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಮನೆ ಬಾಗಿಲಿಗೆ ಜಿಲ್ಲಾಡಳಿತ : ಸಚಿವ ಎಸ್. ಮಧು ಬಂಗಾರಪ್ಪ
ಶಿವಮೊಗ್ಗ : ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ, ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪ್ರಜಾ ಸೇವೆ ಆಂದೋಲನವನ್ನು ಜಾರಿಗೆ ತರಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಶಿಕಾರಿಪುರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗಳಿಗೆ, ಗ್ರಾಮಾಂತರ ಪ್ರದೇಶದಿಂದ ರಾಜಧಾನಿ ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿರುವುದು ಅತ್ಯಂತ ನೋವಿನ ಸಂಗತಿ. ಇದರಿಂದಾಗಿ ಜನರ ಹಣ ಸಮಯ ವ್ಯರ್ಥವಾಗುತ್ತಿದೆ. ಈ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ‘ಪ್ರಜಾ ಸೇವೆ’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಕಾಳಜಿಯಿಂದ ರೂಪುಗೊಂಡಿರುವ ಕಾರ್ಯಕ್ರಮವೆ ಪ್ರಜಾ ಸೇವೆ ಆಂದೋಲನ ಎಂದ ಅವರು ಸಚಿವರು, ಶಾಸಕರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಕುಂದು-ಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಲಿದ್ದಾರೆ ಎಂದವರು ತಿಳಿಸಿದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳ ಅರ್ಜಿಗಳನ್ನು ಹಿಡಿದು ಕಚೇರಿಗಳ ಸುತ್ತಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದ ಅವರು, ಅಧಿಕಾರಿಗಳು ಸರ್ಕಾರಕ್ಕೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸೇವೆ ಒದಗಿಸಬೇಕು. ಜನರ ತೆರಿಗೆಯ ಹಣ ಸದ್ವಿನಿಯೋಗವಾಗಬೇಕು ಎಂದರು.
ಜನರ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲೂ ‘ಪ್ರಜಾ ಸೇವೆ’ ಆಂದೋಲನ ಕಾರ್ಯಕ್ರಮ ನಡೆಸಲಾಗುವುದು. ಅಧಿಕಾರಿಗಳು ಅರ್ಜಿಗಳನ್ನು ಕೇವಲ ಸ್ವೀಕರಿಸುವುದಕ್ಕೆ ಸೀಮಿತವಾಗದೆ, ಮಾನವೀಯ ನೆಲೆಯಲ್ಲಿ ಕಾನೂನುಬದ್ಧವಾಗಿ, ಪಕ್ಷಾತೀತವಾಗಿ
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ವಿಶೇಷ ಗಮನಹರಿಸಬೇಕು ಎಂದವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಬರದ ಛಾಯೆ ಎದ್ದು ಕಾಣುತ್ತಿದೆ. ಜನ – ಜಾನುವಾರುಗಳ ರಕ್ಷಣೆ, ಜಲ ಮತ್ತು ವಿದ್ಯುತ್ ಕ್ಷಾಮ ತಲೆದೋರದಂತೆ ಜನಪ್ರತಿನಿದಿನಗಳು ಮತ್ತು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿರುವಂತೆ ಮನವಿ ಮಾಡಿದರು.
ಏತ ನೀರಾವರಿ ಮೂಲಕ ಗ್ರಾಮೀಣ ಕೆರೆಗಳನ್ನು ತುಂಬಿಸಲಾಗುತ್ತಿದೆ. ಮಳೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಶೇ. 50 ರಷ್ಟು ಪ್ರಮಾಣದಲ್ಲಾದರೂ ಕೆರೆಗಳನ್ನು ತುಂಬಿಸಲು ಅಧಿಕಾರಿಗಳು ಗಮನಹರಿಸಬೇಕು ಎಂದ ಅವರು ಮಾನ್ಯ ಸಚಿವರು ಮಾನ್ಯ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಪ್ರತ್ಯೇಕವಾದ ನೀರಾವರಿ ಯೋಜನೆ ಕೆರೆ ನಿರ್ವಹಣಾ ಕೇಂದ್ರವನ್ನು ಸ್ಥಾಪೀಸಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಇಲಾಖಾ ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ಸರ್ಕಾರದ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಆದ್ದರಿಂದ ಆಂತರಿಕವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 4351ಕೆರೆಗಳಿದ್ದು, ಆ ಪೈಕಿ 1017ಕೆರೆಗಳ ಒತ್ತುವರಿಯಾಗಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ರಾಜ್ಯಧ್ಯಕ್ಷ ನಗರದ ಮಹದೇವಪ್ಪ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಗೌಡ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಸಾಗರ ಮತ್ತು ಶಿವಮೊಗ್ಗದ ಉಪವಿಭಾಗಾಧಿಕಾರಿಗಳಾದ ವಿರೇಶ್, ಡಾ.ಮೈತ್ರಿ, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಅಲ್ಲದೇ ಪಲಾನುಭವಿಗಳಿಗೆ ಕೃಷಿ ಹೊಂಡ ನಿರ್ಮಾಣಕ್ಕೆ ಕಾರ್ಯದೇಶ, ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್ ಪುಸ್ತಕ, ಆಪತ್ ಮಿತ್ರ ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ಸುರಕ್ಷತಾ ಕಿಟ್ ಮತ್ತಿತರ ಸೌಲತ್ತುಗಳನ್ನು ವಿತರಿಸಲಾಯಿತು. ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಖಾತೆ ಪೋಡಿ, ಧರಕಾಸ್ತು ಜಮೀನು, ಜಮೀನುಗಳಿಗೆ ಕಾಲುದಾರಿ, ಮನೆ, ವಿವೇಶನ ಕೊಡಿ, ಶಾಲೆಗೆ ಸೌಲಭ್ಯ ಕಲ್ಪಿಸಿ ಮುಂತಾದ ದೂರುಗಳು ಸಲ್ಲಿಕೆಯಾದವು.

