ಕಾರವಾರ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ವನ್ಯಜೀವಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಶಿರಸಿ ಅರಣ್ಯ ಸಂಚಾರಿ ದಳ ಸಿಬ್ಬಂದಿ ಬಂಧಿಸಿದ್ದಾರೆ.
ಶಂಕರ ಸಿದ್ದಿ, ನರಸಿಂಹ ಸಿದ್ದಿ ಬಂಧಿತ ಆರೋಪಿಗಳು. ಬಂಧಿತರಿಂದ 15.748 ಕೆಜಿ ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಕಾಡಮ್ಮೆ ಕೊಂಬುಗಳು, ಎಂಟು ಹುಲಿ ಉಗುರುಗಳು, 12 ಚಿರತೆ ಉಗುರುಗಳು, ಎರಡು ಹುಲಿ ಹಲ್ಲುಗಳು, ಮೂರು ಚಿರತೆ ಹಲ್ಲು, ಆರು ಕಾಡು ಹಂದಿ ಹಲ್ಲುಗಳು, ಒಂದು ಬೈಕ್, ಒಂದು ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಕದ್ದಮೆ ಮೇಲೆ ದಾಖಲಿಸಲಾಗಿದೆ. ಇನ್ನು ಕೆಲವು ವ್ಯಕ್ತಿಗಳು ತಲೆಮರೆಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ರಕ್ತದಲ್ಲಿ ಪತ್ರ ಬರೆದ ಶಿಕ್ಷಕ
ಶಿಕಾರಿಪುರ: 1995ರ ನಂತರದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಶಿಕ್ಷಕ ಪ್ರಶಾಂತ್ ಸಿರಿಂಜ್ ಮೂಲಕ ತಮ್ಮ ರಕ್ತವನ್ನು ತೆಗೆದುಕೊಂಡು ಪತ್ರ ಬರೆದಿದ್ದಾರೆ. ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅನುದಾನ ಸಮಸ್ಯೆಗೆ ಕಾರಣವೇನು?
1995ರ ನಂತರ ಆರಂಭವಾಗಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನ ನಿಲ್ಲಿಸಿದೆ. ಈ ಕುರಿತು ಕನ್ನಡ ಮಾದ್ಯಮ ಶಾಲೆಗಳ ಶಿಕ್ಷಕರು ಬೆಂಗಳೂರಿನಲ್ಲಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆ ಸಂದರ್ಭ ಕನ್ನಡ ಶಾಲೆಗಳಿಗೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಇನ್ನಷ್ಟು ಶಿಕ್ಷಕರಿಂದ ನೆತ್ತರ ಪತ್ರ
ಮೊದಲು ತಾನು ಸ್ವತಃ ತನ್ನ ರಕ್ತದಿಂದ ಪತ್ರ ಬರೆಯುತ್ತಿರುವುದಾಗಿ ತಿಳಿಸಿರುವ ಶಿಕ್ಷಕ ಪ್ರಶಾಂತ್, ಬೇಡಿಕೆ ಈಡೇರದಿದ್ದರೆ ನವೆಂಬರ್ 1 ರಂದು ಕನ್ನಡ ಶಾಲೆಗಳ ಉಳಿದ ಶಿಕ್ಷಕರು ಸಹ ತಮ್ಮ ರಕ್ತದಿಂದಲೇ ಪತ್ರ ಬರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ನನ್ನ ರಕ್ತದಲ್ಲೇ ಕನ್ನಡವಿದೆ ಎಂದು ಸಚಿವ ಮಧು ಬಂಗಾರಪ್ಪ ಈ ಹಿಂದ ಹೇಳಿದ್ದರು. ಇದೇ ಕಾರಣಕ್ಕೆ ಅವರಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇನೆ. ಸದ್ಯದ ಸ್ಥಿತಿಯಲ್ಲಿ ಅನುದಾನವಿಲ್ಲದೆ ಕನ್ನಡ ಶಾಲೆಗಳಿಗೆ ರಕ್ತವೆ ಇಲ್ಲದಂತಾಗಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ.
ತಂಬಾಕು ದಾಳಿ: ದಂಡ
ದಾವಣಗೆರೆ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಸೆ.8 ರಂದು ವಾರ್ಡ್ ನಂಬರ್ 19 ರಲ್ಲಿ ರಾಜ್ಯ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತಂಡ ಹಾಗೂ ಪಾಲಿಕೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ವತಿಯಿಂದ ತಂಬಾಕು ವ್ಯಾಪಾರಸ್ಥರ ಪ್ರತ್ಯೇಕ ಪರವಾನಗಿಯನ್ನು ಪರಿಶೀಲಿಸಿ ಒಟ್ಟು 20 ಲೈಸೆನ್ಸ್‍ಗಳನ್ನು ನೀಡಲಾಯಿತು.
ಸೆಪ್ಟೆಂಬರ್ ಮಾಹೆಯೊಳಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲಾ ತಂಬಾಕು ಉತ್ಪನ್ನಗಳ ವ್ಯಾಪಾರಸ್ಥರು ಕಡ್ಡಾಯವಾಗಿ ತಂಬಾಕು ಪರವಾನಗಿಯನ್ನು ಪಡೆಯುವಂತೆ ಮತ್ತು ಕಡ್ಡಾಯವಾಗಿ ಕೋಟ್ಪಾ ಕಾಯ್ದೆಯ ಸೆಕ್ಷನ್ 4 ಮತ್ತು ಸೆಕ್ಷನ್ 6ಎ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ತಂಡವು ಸೂಚಿಸಿತು. ನಿಯಮ ಅವಲಂಬಿಸಿ ಮಾರಾಟ ಮಾಡುತ್ತಿರುವವರ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆಯ ಅಡಿಯಲ್ಲಿ ಒಟ್ಟು 6 ಪ್ರಕರಣಗಳನ್ನು ದಾಖಲಿಸಿ ರೂ 2700/- ದಂಡ ವಿಧಿಸಲಾಯಿತು.
ದಾಳಿಯ ವೇಳೆಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗಿಯ ಸಂಯೋಜಕರಾದ ಮಹಾಂತೇಶ್ ಉಳ್ಳಾಗಡ್ಡಿ, ತಂಬಾಕು ಪರವಾನಗಿಯ ರಾಜ್ಯ ಸಲಹೆಗಾರರಾದ ತೀರ್ಥೇಶ್, ಜಿಲ್ಲಾ ಸಲಹೆಗಾರರಾದ ಸತೀಶ್ ಕಲಹಾಳ್, ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ಹೊನ್ನಪ್ಪ, ಶಶಿಧರ್ ನಿಖಿಲ್ ಹಾಗೂ ದಫೇಧರ್ ಅವಿನಾಶ್ ಇದ್ದರು.

