ಬೆಂಗಳೂರು: ಬೆಂಗಳೂರಿನಲ್ಲಿ ಡೆಂಟಲ್ ಸ್ಟೂಡೆಂಟ್ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ಆರು ಲೆಕ್ಚರರ್ ಗಳನ್ನು ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ.
ಒಎಂಆರ್ ವಿಭಾಗದ ಲೆಕ್ಚರರ್ಸ್ ಗಳಾದ ಡಾ. ಅನಿಮೋಲ್, ಡಾ. ಪೈಕಾ, ಡಾ. ಸಿಂಧು, ಡಾ. ಸುಶ್ಮಿನಿ, ಡಾ. ಆಲ್ಬಾ, ಡಾ. ಶಬಾನಾ ಅವರನ್ನು ವಜಾಗೊಳಿಸಲಾಗಿದೆ.
ಲೆಕ್ಚರರ್ಸ್ ವಿರುದ್ಧ ಎಫ್ಐಆರ್ ಮತ್ತು ವಿದ್ಯಾರ್ಥಿಗಳಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಆರು ಮಂದಿ ಪ್ರಾಧ್ಯಾಪಕರನ್ನು ವಜಾ ಮಾಡಲಾಗಿದೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಿನ್ಸಿಪಾಲ್ ಪ್ರಿಯಾ ಸುಬ್ರಮಣಿ ಸೇರಿ 7 ಲೆಕ್ಚರರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಯಶಸ್ವಿನಿ ತಾಯಿ ದೂರಿನ ಮೇರೆಗೆ ಸೂರ್ಯ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಜನವರಿ 8ರಂದು ಚಂದಾಪುರದ ಮನೆಯಲ್ಲಿ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಯಶಸ್ವಿನಿ ಆತ್ಮಹತ್ಯೆಗೆ ಕಾಲೇಜು ಲೆಕ್ಚರರ್ಸ್ ಕಿರುಕುಳ ಎಂದು ಆರೋಪಿಸಲಾಗಿತ್ತು. ಸಹಪಾಠಿಗಳ ಮುಂದೆ ಯಶಸ್ವಿನಿಯ ಮೈಬಣ್ಣ ಮತ್ತು ಡ್ರೆಸ್ ಬಗ್ಗೆ ಲೆಕ್ಚರರ್ಸ್ ಟೀಕಿಸಿದ್ದರು.
ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ ಎಂದು ಟೀಕಿಸಿದ್ದಾಗಿ ಆರೋಪ ಮಾಡಲಾಗಿದೆ. ಅಲ್ಲದೇ, ವಿದ್ಯಾರ್ಥಿನಿ ಕಣ್ಣು ನೋವು ಎಂದಿದ್ದಕ್ಕೆ ಕೊಂಕು ಮಾತನಾಡಿದ್ದರು. ಸೆಮಿನಾರ್ ಮತ್ತು ರೇಡಿಯೋಲಜಿ ಕೇಸ್ ನೀಡದೆ ಕಿರುಕುಳ ನೀಡಿದ್ದರು. ಲೆಕ್ಚರರ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ‘ಜಸ್ಟಿಸ್ ಫಾರ್ ಯಶಸ್ವಿನಿ’ ಎಂದು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಕೊನೆಗೂ ತಪ್ಪಿತಸ್ಥರನ್ನು ಕಾಲೇಜಿನ ಆಡಳಿತ ಮಂಡಳಿ ವಜಾಗೊಳಿಸಿದೆ.
ಪ್ರಿನ್ಸಿಪಾಲ್ ಡಾ ಪ್ರಿಯಾ ವಿರುದ್ಧವೂ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಆಕ್ಸ್ ಫರ್ಡ್ ಡೆಂಟಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ. ರಮೇಶ್ ಹೇಳಿದ್ದಾರೆ.

