ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಕುರಿಗಾಹಿಗಳ ಮೇಲೆ ಜಮೀನು ಮಾಲೀಕ ಹಲ್ಲೆ ಮಾಡಿದ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ಅಡಿಕೆ ತೋಟದಲ್ಲಿ ನಡೆದಿದೆ.
ಕುರಿಗಾಹಿಗಳಾದ ನಾಗರಾಜ್(18), ಬಾಳಪ್ಪ(40) ಹಲ್ಲೆಗೊಳಗಾದವರು. ನಾಲ್ಕು ಕುರಿಗಳು ಅಡಿಕೆ ತೋಟಕ್ಕೆ ನುಗ್ಗಿದ್ದಕ್ಕೆ ನಾಗರಾಜ್ ಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಅಡಿಕೆ ತೋಟದ ಮಾಲೀಕರ ಹಲ್ಲೆಯಿಂದ ನಾಗರಾಜ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಪುತ್ರ ನಾಗರಾಜ್ ಸ್ಥಿತಿ ಕಂಡು ಪ್ರಶ್ನಿಸಲು ಹೋದ ಬಾಳಪ್ಪನ ಮೇಲೆಯೂ ಹಲ್ಲೆ ಮಾಡಲಾಗಿದೆ.
ಕಾರಿಗನೂರಿನ ಪ್ರಕಾಶ್, ವೀರೇಶ್ ವಿರುದ್ಧ ಮಾರಣಾಂತಿಕ ಹಲ್ಲೆ ಆರೋಪ ಕೇಳಿ ಬಂದಿದೆ. ಗಂಭೀರವಾಗಿ ಗಾಯಗೊಂಡ ನಾಗರಾಜ್ ನನ್ನು ದಾವಣಗೆರೆಯ ಎಸ್ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮತ್ತೊಮ್ಮೆ ಕುರಿಗಳು ಅಡಿಕೆ ತೋಟಕ್ಕೆ ನುಗ್ಗಿದರೆ ಜೆಸಿಬಿಯಿಂದ ಗುಂಡಿ ತೆಗೆದು ನಿಮ್ಮನ್ನು ಇಲ್ಲೇ ಹೂತು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದವರ ವಿರುದ್ಧ ಹದಡಿ ಪೊಲೀಸ್ ಠಾಣೆಗೆ ಬಾಳಪ್ಪ ದೂರು ನೀಡಿದ್ದಾರೆ.

