ಬೆಂಗಳೂರು: ಮಧ್ಯರಾತ್ರಿ ಪಟಾಕಿಗಳ ಸದ್ದು ಹಾಗೂ ಜೋರಾದ ಸಂಗೀತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಇದೀಗ ಮತ್ತೊಂದು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ಮುಂಜಾನೆ 3 ಗಂಟೆಯಾದರೂ ಪಟಾಕಿ ಸಿಡಿಸಲಾಗುತ್ತಿದೆ ಮತ್ತು ಜೋರಾಗಿ ಸಂಗೀತ ಹಾಕಲಾಗುತ್ತಿದೆ ಎಂದು ಈ ಹಿಂದೆ ಆರೋಪಿಸಿದ್ದ ಅವರು, ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸರ ಗಮನ ಸೆಳೆದಿದ್ದರು.
ಇದೀಗ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ರಮ್ಯಾ, ಪಟಾಕಿ ಸಿಡಿಸಿದ ಘಟನೆ ಫನ್ ವರ್ಲ್ಡ್‌ನಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ರಾಧಾಕೃಷ್ಣ ಥಿಯೇಟರ್ ಪಕ್ಕದಲ್ಲಿರುವ ಸರ್ಕಾರಿ ಶಾಲೆಯ ಮೈದಾನದಲ್ಲಿ ಪಟಾಕಿ ಸಿಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಇದು ಫನ್ ವರ್ಲ್ಡ್‌ನಲ್ಲಿ ನಡೆದ ಘಟನೆ ಅಲ್ಲ. ರಾಧಾಕೃಷ್ಣ ಥಿಯೇಟರ್ ಪಕ್ಕದಲ್ಲಿರುವ ಸರ್ಕಾರಿ ಶಾಲೆಯ ಮೈದಾನದಲ್ಲಿ ಈ ಘಟನೆ ನಡೆದಿದೆ” ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಘಟನೆ..?
ಮಧ್ಯರಾತ್ರಿ ಪಟಾಕಿಗಳ ಸದ್ದು ಮತ್ತು ಜೋರಾದ ಸಂಗೀತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ಮುಂಜಾನೆ 3 ಗಂಟೆಯಾದರೂ ಪಟಾಕಿ ಸಿಡಿಸಲಾಗುತ್ತಿದೆ ಮತ್ತು ಜೋರಾಗಿ ಸಂಗೀತ ಹಾಕಲಾಗುತ್ತಿದೆ ಎಂದು ನಟಿ ರಮ್ಯಾ ಆರೋಪಿಸಿದ್ದರು.
ರಮ್ಯಾ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದರು. ಮುಂಜಾನೆ 3 ಗಂಟೆಯಾದರೂ ಪಟಾಕಿ ಸಿಡಿಸುವುದು ಮತ್ತು ಜೋರಾಗಿ ಸಂಗೀತ ಹಾಕುವುದನ್ನು ಮುಂದುವರಿಸುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಕೆಲವು ವಿನಾಯಿತಿಗಳನ್ನು ನೀಡುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಮುಂಜಾನೆ ಇಂತಹ ಶಬ್ದ ಮಾಡುವುದು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಫನ್ ವರ್ಲ್ಡ್ ಸುತ್ತಮುತ್ತ ಆಸ್ಪತ್ರೆಗಳಿದ್ದು, ವೃದ್ಧರು ಮತ್ತು ಚಿಕ್ಕ ಮಕ್ಕಳು ವಾಸಿಸುತ್ತಿದ್ದಾರೆ. ಇಂತಹ ಶಬ್ದದಿಂದ ಅವರ ನಿದ್ದೆ ಹಾಗೂ ನೆಮ್ಮದಿಗೆ ತೊಂದರೆಯಾಗುತ್ತದೆ ಎಂದು ರಮ್ಯಾ ಕಳವಳ ವ್ಯಕ್ತಪಡಿಸಿದ್ದರು.
ರಮ್ಯಾ ಆರೋಪಕ್ಕೆ ಫನ್ ವರ್ಲ್ಡ್ ಸ್ಪಷ್ಟನೆ
ಇನ್ನೊಂದೆಡೆ, ರಮ್ಯಾ ಅವರ ಆರೋಪಕ್ಕೆ ಫನ್ ವರ್ಲ್ಡ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿತ್ತು.
ಫನ್ ವರ್ಲ್ಡ್‌ನಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಮಾತ್ರ ಚಟುವಟಿಕೆಗಳು ನಡೆಯುತ್ತವೆ. ರಮ್ಯಾ ಉಲ್ಲೇಖಿಸಿರುವ ಸಮಯದಲ್ಲಿ ಕೇಂದ್ರ ತೆರೆದಿರುವುದಿಲ್ಲ. ಅಲ್ಲದೆ, ತಮ್ಮ ಆವರಣದಲ್ಲಿ ಪಟಾಕಿ ಸಿಡಿಸಲು ಅನುಮತಿಯಿಲ್ಲ ಮತ್ತು ಪ್ರವೇಶಿಸುವವರ ಬ್ಯಾಗ್‌ಗಳನ್ನು ಪರಿಶೀಲಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿತ್ತು.
ಫನ್ ವರ್ಲ್ಡ್ ಎದುರಿನ ಪ್ರದೇಶದಲ್ಲಿ ದಸರಾ ಆಚರಣೆ ನಡೆಯುವುದರಿಂದ, ಅಲ್ಲಿ ಪಟಾಕಿ ಸಿಡಿಸಿರಬಹುದು. ಅದನ್ನು ತಪ್ಪಾಗಿ ಗ್ರಹಿಸಿ ತಮ್ಮ ಕೇಂದ್ರದ ವಿರುದ್ಧ ಆರೋಪ ಮಾಡಿರಬಹುದು ಎಂದು ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ. ಅಗತ್ಯವಿದ್ದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬಹುದು ಎಂದೂ ಸ್ಪಷ್ಟಪಡಿಸಿತ್ತು.

