ಮಂಗಳೂರು: ಮಂಗಳವಾರ ಪವಿತ್ರ ರಂಜಾನ್ ಮಾಸದ ಪ್ರಥಮ ಚಂದ್ರ ದರ್ಶನ ಆಗಿಲ್ಲ. ಹೀಗಾಗಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದೆ.
ಪವಿತ್ರ ರಂಜಾನ್ ಪ್ರಥಮ ಚಂದ್ರ ದರ್ಶನ ಮಂಗಳವಾರ ಆಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಗುರುವಾರದಿಂದ ರಂಜಾನ್ ಉಪವಾಸ ಆಚರಿಸಲಾಗುವುದು.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹಮದ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿ ಕೋಶಾಧಿಕಾರಿ ಎಸ್.ಎ. ರಶೀದ್ ಹಾಜಿ ಮಾಹಿತಿ ನೀಡಿದ್ದಾರೆ.
ಇಂದು ಚಂದ್ರದರ್ಶನವಾಗದ ಕಾರಣ ಗುರುವಾರದಿಂದ ರಂಜಾನ್ ಉಪವಾಸ ಪ್ರಾರಂಭವಾಗಲಿದೆ ಎಂದು ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸಂಯುಕ್ತ ಖಾಝೀ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಅವರು ಗುರುವಾರದಿಂದ ರಂಜಾನ್ ಪ್ರಾರಂಭ ಎಂದು ತಿಳಿಸಿದ್ದಾರೆ.

