HomeLatest NewsT20 World Cup 2026: ಪಂದ್ಯ ರದ್ದಾಗಿ ಸೂಪರ್ 8ಗೆ ಲಗ್ಗೆ ಇಟ್ಟ ಜಿಂಬಾಬ್ವೆ; ಟೂರ್ನಿಯಿಂದ...

T20 World Cup 2026: ಪಂದ್ಯ ರದ್ದಾಗಿ ಸೂಪರ್ 8ಗೆ ಲಗ್ಗೆ ಇಟ್ಟ ಜಿಂಬಾಬ್ವೆ; ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿದ ಆಸ್ಟ್ರೇಲಿಯಾ

ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಇಂದು ( ಫೆಬ್ರವರಿ 17 ) ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ 32ನೇ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯದಲ್ಲಿ ಬಿ ಗುಂಪಿನ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

ಇನ್ನು ಈ ಪಂದ್ಯದ ಫಲಿತಾಂಶ ಬಿ ಗುಂಪಿನಿಂದ ಯಾವ ತಂಡ ಸೂಪರ್ 8 ತಲುಪಲಿದೆ ಎಂಬುದರ ಮೇಲೆ ಪ್ರಭಾವ ಬೀರಿದ್ದ ಕಾರಣಕ್ಕಾಗಿ ಈ ಪಂದ್ಯ ಮಹತ್ವವನ್ನು ಪಡೆದುಕೊಂಡಿತ್ತು.

ಹೌದು, ಬಿ ಗುಂಪಿನಿಂದ ಶ್ರೀಲಂಕಾ ಸೂಪರ್ 8 ಸುತ್ತಿಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದ್ದು, ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ಎರಡು ತಂಡಗಳಿಗೆ ಎರಡನೇ ಸ್ಥಾನ ಪಡೆಯುವ ಸಾಧ್ಯತೆಗಳಿದ್ದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಟ್ರೇಲಿಯಾ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದು, ಕೇವಲ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಜಿಂಬಾಬ್ವೆ ಆಡಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲಿಯೂ ಗೆದ್ದು ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು.

ಹೀಗಾಗಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಈ ಪಂದ್ಯದಲ್ಲಿ ಐರ್ಲೆಂಡ್ ಗೆದ್ದರೆ ಮಾತ್ರ ಆಸ್ಟ್ರೇಲಿಯಾ ಸೂಪರ್ 8 ಕನಸು ಜೀವಂತವಾಗಿ ಉಳಿದುಕೊಳ್ಳುತ್ತಿತ್ತು. ಒಂದುವೇಳೆ ಜಿಂಬಾಬ್ವೆ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದ್ದು, ಜಿಂಬಾಬ್ವೆ ನೇರವಾಗಿ ಸೂಪರ್ 8 ತಲುಪುವುದರಲ್ಲಿತ್ತು.

ಹೀಗೆ ಭಾರೀ ಮಹತ್ವ ಪಡೆದುಕೊಂಡಿರುವ ಈ ಪಂದ್ಯದ ಟಾಸ್ ನಡೆಯುವ ಮುನ್ನವೇ ಮಳೆ ಆಗಮನವಾಗಿ ಟಾಸ್ ಸಹ ಆಗದೇ ಪಂದ್ಯ ರದ್ದಾಗಿದೆ. ಈ ಮೂಲಕ ಐರ್ಲೆಂಡ್ ಹಾಗೂ ಜಿಂಬಾಬ್ವೆ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ ಲಭಿಸಿದ್ದು, 5 ಅಂಕಗಳನ್ನು ಪಡೆದ ಜಿಂಬಾಬ್ವೆ ನೇರವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಸದ್ಯ ಎರಡು ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಉಳಿದ ಪಂದ್ಯವನ್ನು ಗೆದ್ದರೂ 4 ಅಂಕಗಳನ್ನು ಪಡೆಯಲಿದೆ. ಹೀಗಾಗಿ ಜಿಂಬಾಬ್ವೆ ಮುಂದಿನ ಸುತ್ತಿಗೆ ಪ್ರವೇಶಿಸಿದ್ದು, ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular