ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ಅಧ್ವಾನಕ್ಕೆ ಬಾಲಕನೊಬ್ಬ ಚರಂಡಿಗೆ ಬಿದ್ದಿರುವ ಘಟನೆ ಬೆಂಗಳೂರಿನ ಗೋವಿಂದಪುರದಲ್ಲಿ ನಡೆದಿದೆ.
ಜಿಬಿಎ ಅಧಿಕಾರಿಗಳು ಕಾಮಗಾರಿ ಹೆಸರಲ್ಲಿ ರಸ್ತೆ ಪಕ್ಕದಲ್ಲಿಯೇ ಚರಂಡಿಯ ಸ್ಲ್ಯಾಬ್ ಓಪನ್ ಆಗಿಟ್ಟಿದ್ದು, ರಸ್ತೆ ಬದಿ ನಡೆದು ಹೋಗುತ್ತಿದ್ದ ಬಾಲಕ ೧ನೇ ತರಗತಿ ವಿದ್ಯಾರ್ಥಿಯೊಬ್ಬ ಆಯತಪ್ಪಿ ಚರಂಡಿಯೊಳಗೆ ಬಿದ್ದಿದ್ದಾನೆ.
ಬಾಲಕ ಚರಂಡಿಗೆ ಬಿದ್ದನ್ನು ಕಂಡ ಸ್ಥಳೀಯರು ತಕ್ಷಣ ಧಾವಿಸಿ ಬಂದು ಬಾಲಕನ್ನು ಮೇಲಕೆತ್ತಿ ರಕ್ಷಿಸಿದ್ದಾರೆ. ಬಾಲಕನ ಬಟ್ಟೆ, ಬ್ಯಾಗ್ ಎಲ್ಲವೂ ಕೊಳಚೆ ನೀರಿನಿಂದ ಕೆಸರುಮಯವಾಗಿದೆ. ಬಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಜಿಬಿಎ ಕಾಮಗಾರಿ ನೆಪದಲ್ಲಿ ಬೆಂಗಳೂರು ನಗರದಾದ್ಯಂತ ಕಾಮಗಾರಿ ಹೆಸರಿನಲ್ಲಿ ಅರೆಬರೆ ರಸ್ತೆ ಕಾಮಗಾರಿ, ಅರೆಬರೆ ಚರಂಡಿ ಕಾಮಗಾರಿಗಳನ್ನು ಮಾಡಿ ಇಡೀ ನಗರವನ್ನು ಅಧ್ವಾನ ಮಾಡಿದೆ. ಅಲ್ಲಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗಿದ್ದರೆ ಇನ್ನೂ ಹಲವೆಡೆ ರಸ್ತೆಗುಂಡಿಗಳು ಬಾಯ್ತೆರೆದು ನಿಂತಿವೆ. ಇನ್ನು ಕೆಲವೆಡೆ ಮುಚ್ಚಿರುವ ರಸ್ತೆಗುಂಡಿಗಳು ಕಳಪೆ ಕಾಮಗಾರಿಯಿಂದಾಗಿ ಮತ್ತೆ ಅದೋಗತಿಗೆ ತಪುಪಿದೆ.
ಜಿಬಿಎ ಅಧಿಕಾರಿಗಳ ಕಾಮಗಾರಿ ವಿಳಂಬ, ಅರ್ಧಂಬರ್ಧ ಕೆಲಸಗಳಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಮಾತ್ರವಲ್ಲ ದೊಡ್ದವರೂ, ವಾಹನ ಸವಾರರು ಕೂಡ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ಎದುರಾಗಿದೆ.

