ಧಾರವಾಡ: ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕಿಟ್ ಮತ್ತು ವೈದ್ಯರಿಲ್ಲದ ಆರೋಪ ಕೇಳಿ ಬಂದಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಶವ ಇಟ್ಟು ಪ್ರತಿಭಟನೆ ನಡೆಸಲಾಗಿದೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಿಗೇರಿ ಗ್ರಾಮದಲ್ಲಿ ವಿದ್ಯುತ್ ತಂಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡಿದ್ದ ಬಾಲಕ ಕಾರ್ತಿಕ್ ಪೂಜಾರ್(12) ನನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಕುಂದಗೋಳ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಲಾಗಿದೆ.
ಆಂಬುಲೆನ್ಸ್ ನಲ್ಲಿ ಕುಂದಗೋಳ ಆಸ್ಪತ್ರೆಗೆ ಸಾಗಿಸುವಾಗ ಬಾಲಕ ಮೃತಪಟ್ಟಿದ್ದು, ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕಿಟ್ ಇರಲಿಲ್ಲ. ವೈದ್ಯರು ಕೂಡ ಇರಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಾಲಕ ಮೃತಪಟ್ಟಿದ್ದಾನೆ ಎಂದು ಗುಡಗೇರಿ ಸರ್ಕಾರಿ ಆಸ್ಪತ್ರೆಯ ಹೆಸರು ಶವ ಇಟ್ಟು ಪ್ರತಿಭಟನೆ ನಡೆಸಲಾಗಿದೆ.
ಲಕ್ಷ್ಮೇಶ್ವರ -ಹುಲಗೂರು ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಧಾರವಾಡ ಎಸಿ, ಡಿಎಸ್ಪಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದ್ದಾರೆ. ಗುಡಗೇರಿ ಆಸ್ಪತ್ರೆಗೆ ಅಗತ್ಯ ವೈದ್ಯರನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೆ, ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರದ ಭರವಸೆ ನೀಡಿದ್ದು, ಬಳಿಕ ಗ್ರಾಮದ ಜನ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.

