ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 1122 ವೈದ್ಯಕೀಯ ಸೀಟು ಮಂಜೂರು ಮಾಡಲಾಗಿದೆ.
550 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಮತ್ತು 572 ವೈದ್ಯಕೀಯ ಸೀಟುಗಳನ್ನು ಹೆಚ್ಚುವರಿಯಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಇಷ್ಟು ಪ್ರಮಾಣದಲ್ಲಿ ಹೆಚ್ಚುವರಿ ಸೀಟು ಹಂಚಿಕೆ ಇದೇ ಮೊದಲಾಗಿದೆ. ಬಹು ಪಾಲು ಸೀಟುಗಳನ್ನು ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಹಂಚಿಕೆ ಮಾಡಲಾಗಿದೆ. ಇದು 10 ಕಾಲೇಜುಗಳ ಸ್ಥಾಪನೆಗೆ ಸಮನಾಗಿದೆ.
ವಿಕಾಸಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 550 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಮತ್ತು 572 ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಲಾಗಿದ್ದು, ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಹೆಚ್ಚುವರಿಯಾಗಿ 1122 ಪಿಜಿ ಮತ್ತು ಯುಜಿ ವೈದ್ಯಕೀಯ ಸೀಟುಗಳನ್ನು ನೀಡುತ್ತಿದ್ದು, ಇವುಗಳಲ್ಲಿ ಬಹುಪಾಲನ್ನು ಕೊಪ್ಪಳ, ಶಿವಮೊಗ್ಗ, ಹುಬ್ಬಳ್ಳಿ, ಮಂಡ್ಯ, ಗದಗ, ಮಡಿಕೇರಿ, ಚಾಮರಾಜನಗರ, ಹಾವೇರಿ, ಚಿಕ್ಕಮಗಳೂರು ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುವುದು. ಹೆಚ್ಚುವರಿ ವೈದ್ಯಕೀಯ ಸೀಟು ಹಂಚಿಕೆ ಮಾಡಿ ಮೂಲಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರ ಒಟ್ಟಾರೆ 1090 ಕೋಟಿ ರೂ. ಅನುದಾನ ನೀಡಲಿದೆ. ರಾಜ್ಯ ಸರ್ಕಾರ 600 ಕೋಟಿ ರೂ.ಗೂ ಹೆಚ್ಚಿನ ಅನುದಾನ ಕೊಡಲಿದೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಸೀಟುಗಳ ಹಂಚಿಕೆಯಿಂದ ರಾಜ್ಯಕ್ಕೆ ಯಾವುದೇ ಹೊಸ ಮೆಡಿಕಲ್ ಕಾಲೇಜ್ ನಿರ್ಮಿಸದೇ ಹೆಚ್ಚುವರಿಯಾಗಿ 10 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿದಂತಾಗಿದೆ. ಒಂದೇ ವರ್ಷ ಒಂದು ಸಾವಿರಕ್ಕೂ ಅಧಿಕ ಮೆಡಿಕಲ್ ಸೀಟುಗಳು ಒಂದು ರಾಜ್ಯಕ್ಕೆ ದೊರೆತಿರುವುದು ದಾಖಲೆಯಾಗಿದೆ ಎಂದು ಹೇಳಿದ್ದಾರೆ.

