ತಮ್ಮ ಮುಂಬರುವ ಹಾರರ್ ಕಾಮಿಡಿ ಚಿತ್ರ ”ಭೂತ್ ಬಂಗ್ಲಾ’ ‘ (Bhooth Bangla) ಬಿಡುಗಡೆಗೆ ಸಿದ್ಧರಾಗುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಚಿತ್ರದ ಹೈ-ವೋಲ್ಟೇಜ್ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವಾಗ ಗಾಯಗೊಂಡಿದ್ದಾರೆ.
ಸಾಹಸ ದೃಶ್ಯಗಳನ್ನು ಸ್ವತಃ ತಾವೇ ಮಾಡುವುದರಲ್ಲಿ ಹೆಸರುವಾಸಿಯಾದ ಅಕ್ಷಯ್ ಕುಮಾರ್, ಈ ದೃಶ್ಯದಲ್ಲಿ ಗಾಳಿಯಲ್ಲಿ ಜಿಗಿದು ಕಿಕ್ ನೀಡುವ (jump kick) ಸಾಹಸ ಮಾಡುತ್ತಿದ್ದರು. ಆದರೆ, ಕೆಳಕ್ಕೆ ಇಳಿಯುವಾಗ ಸಮತೋಲನ ತಪ್ಪಿ ಬಿದ್ದಿದ್ದರಿಂದ ಅವರಿಗೆ ಗಾಯಗಳಾಗಿವೆ. ಚಿತ್ರತಂಡವು ಗುರುವಾರ ಈ ಘಟನೆಯ ಬಿಟಿಎಸ್ (BTS) ವಿಡಿಯೋವನ್ನು ಹಂಚಿಕೊಂಡಿದೆ.
ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅವರು ಸಾಹಸ ದೃಶ್ಯಗಳಲ್ಲಿ ವಿಎಫ್ಎಕ್ಸ್ (VFX) ಮತ್ತು ಎಐ (AI) ಬಳಕೆಯನ್ನು ವಿರೋಧಿಸುವುದಾಗಿ ತಿಳಿಸಿದ್ದರು. ಇಂತಹ ತಂತ್ರಜ್ಞಾನಗಳು ಸಾಹಸದ ನೈಜತೆಯನ್ನು ಹಾಳುಮಾಡುತ್ತವೆ ಮತ್ತು ಕೃತಕವಾಗಿ ಕಾಣುವಂತೆ ಮಾಡುತ್ತವೆ ಎಂಬುದು ಅವರ ಅಭಿಪ್ರಾಯ. ಪ್ರೇಕ್ಷಕರಿಗೆ ಕಲಾವಿದನ ಶ್ರಮ ಮತ್ತು ನೈಜತೆ ಮನವರಿಕೆಯಾಗಬೇಕೆಂದರೆ ನೈಜ ಸಾಹಸಗಳೇ ಇರಬೇಕು ಎಂದು ಅವರು ಪ್ರತಿಪಾದಿಸಿದ್ದರು.
ಬಿಡುಗಡೆ ದಿನಾಂಕ ಮುಂದೂಡಿಕೆ
ಪ್ರಿಯದರ್ಶನ್ ನಿರ್ದೇಶನದ ಈ ಚಿತ್ರದಲ್ಲಿ ಪರೇಶ್ ರಾವಲ್, ಅಸ್ರಾನಿ, ರಾಜ್ಪಾಲ್ ಯಾದವ್ ಮತ್ತು ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೊದಲು ಏಪ್ರಿಲ್ 10 ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಈಗ ಏಪ್ರಿಲ್ 16 ರಂದು ತೆರೆಗೆ ಬರಲಿದೆ.
ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್‘ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ, ‘ಭೂತ್ ಬಂಗ್ಲಾ’ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಸಹ-ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
ಏಕ್ತಾ ಕಪೂರ್ ಅವರ ಪೋಸ್ಟ್
“ವಿತರಕರು ಮತ್ತು ಪ್ರದರ್ಶಕರೊಂದಿಗೆ ಚರ್ಚಿಸಿದ ನಂತರ, ನಾವು ‘ಭೂತ್ ಬಂಗ್ಲಾ’ ಚಿತ್ರವನ್ನು ಏಪ್ರಿಲ್ 16 ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಅಂದು ರಾತ್ರಿ 9 ಗಂಟೆಯಿಂದ ಮೊದಲ ಪ್ರದರ್ಶನ ಆರಂಭವಾಗಲಿದೆ. ‘ಧುರಂಧರ್: ದಿ ರಿವೆಂಜ್’ ಅದ್ಭುತವಾಗಿ ಪ್ರದರ್ಶನ ಕಾಣುತ್ತಿರುವುದು ಚಿತ್ರರಂಗಕ್ಕೆ ಶುಭ ಸುದ್ದಿಯಾಗಿದೆ. ಈ ಬದಲಾವಣೆಯು ಎರಡೂ ಚಿತ್ರಗಳಿಗೆ ಸೂಕ್ತವಾದ ಅವಕಾಶ ಮತ್ತು ಗಮನ ಸಿಗಲು ಸಹಕಾರಿಯಾಗಲಿದೆ.”
ಬಾಲಾಜಿ ಮೋಷನ್ ಪಿಕ್ಚರ್ಸ್ ಪ್ರೆಸೆಂಟ್ ಮಾಡಿರುವ ಈ ಚಿತ್ರವನ್ನು ಅಕ್ಷಯ್ ಕುಮಾರ್, ಶೋಭಾ ಕಪೂರ್ ಮತ್ತು ಏಕ್ತಾ ಆರ್ ಕಪೂರ್ ನಿರ್ಮಿಸಿದ್ದಾರೆ. ಅಂತಿಮವಾಗಿ ಏಪ್ರಿಲ್ 16 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಅಪ್ಪಳಿಸಲಿದೆ.

