ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಝಾಂಬಿ ಡ್ರಗ್ಸ್ ಬಗ್ಗೆ ಸುಳ್ಳು ಸುದ್ದಿ ಪ್ರಚಾರ ಮಾಡಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಬಾಗಲೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಅರೆಪ್ರಜ್ಞನಾಗಿ ನಡೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ವಿಡಿಯೋದಲ್ಲಿ ಝಾಂಬಿ ಡ್ರಗ್ಸ್ ತೆಗೆದುಕೊಂಡು ಈ ರೀತಿ ವರ್ತಿಸುತ್ತಿದ್ದಾನೆ ಎಂದು ಕೆಲವರು ಶಂಕಿಸಿದ್ದರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆ ಸಮೀಪ ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆತನ ತಪಾಸಣೆ ನಡೆಸಿದ ವೈದ್ಯರು ಆ ವ್ಯಕ್ತಿ ಯಾವುದೇ ಮಾದಕ ವಸ್ತು ಅಥವಾ ಮನೋಪ್ರೇರಕ ಪದಾರ್ಥ ಸೇವಿಸಿರುವುದಿಲ್ಲ. ಆತನಿಗೆ ಸಂಧಿವಾತ ಇದ್ದು, ವೈದ್ಯರು ನೀಡಿದ ನೋವು ನಿವಾರಕ ಔಷಧಗಳೊಂದಿಗೆ ಮದ್ಯ ಸೇವಿಸಿದ್ದರು. ಇದರಿಂದ ಆತ ಒಂದೇ ಕಡೆ ನಿಂತಿರುವ ಸ್ಥಿತಿಯಲ್ಲಿ ಇರುವಂತೆ ವಿಡಿಯೋದಲ್ಲಿ ಗೋಚರವಾಗಿತ್ತು. ಝಾಂಬಿ ಡ್ರಗ್ಸ್ ಸೇವನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಯಾವುದೇ ವಿಡಿಯೋವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಬೆಂಗಳೂರಿಗೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ. ಜಾಲತಾಣದಲ್ಲಿ ವಿಡಿಯೋ ಹಾಕಿ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

