ಪ್ರಶಾಂತ್ ವರ್ಮ ನಿರ್ದೇಶನದ ಮತ್ತು ತೇಜ ಸಜ್ಜಾ ನಟನೆಯ ‘ಹನುಮಾನ್’ (HanuMan) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಾವ ಮಟ್ಟಿಗೆ ಸೆನ್ಸೇಷನ್ ಸೃಷ್ಟಿಸಿತ್ತು ಎಂಬುದು ಎಲ್ಲರಿಗೂ ಗೊತ್ತು. ಜಾಗತಿಕವಾಗಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ಬರೆದಿದ್ದ ಈ ನ್ಯಾಷನಲ್ ಅವಾರ್ಡ್ ವಿನ್ನರ್ ಸೂಪರ್ ಹೀರೊ ಫ್ಯಾಂಟಸಿ ಚಿತ್ರ, ಈಗ ಪ್ರೇಕ್ಷಕರಿಗೆ ಮತ್ತೊಂದು ದೃಶ್ಯ ವೈಭವ ನೀಡಲು ಸಜ್ಜಾಗಿದೆ. ಹೌದು, ಈ ಬ್ಲಾಕ್ಬಸ್ಟರ್ ಸಿನಿಮಾ ಈಗ 3D (Three Dimensional) ರೂಪದಲ್ಲಿ ಮತ್ತೊಮ್ಮೆ ಬೆಳ್ಳಿಪರದೆಗೆ ಬರಲಿದ್ದು, ಇತ್ತೀಚಿನ ಅಪ್ಡೇಟ್ ಪ್ರಕಾರ ಜೂನ್ 25, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಏನಿದರ ವಿಶೇಷತೆ? ‘ಹನುಮಾನ್’ ಚಿತ್ರದ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ (VFX) ಕೆಲಸಗಳು ಕಡಿಮೆ ಬಜೆಟ್ನಲ್ಲೇ ಅದ್ಭುತವಾಗಿ ಮೂಡಿಬಂದಿದ್ದವು. ಈಗ ಚಿತ್ರವನ್ನು 3D ಮಾದರಿಯಲ್ಲಿ ಮರು-ಬಿಡುಗಡೆ ಮಾಡುತ್ತಿರುವುದರಿಂದ, ಚಿತ್ರದಲ್ಲಿನ ಆಕ್ಷನ್ ಸೀನ್ಗಳು ಮತ್ತು ಹನುಮಂತನ ಭವ್ಯ ದೃಶ್ಯಗಳು ಪ್ರೇಕ್ಷಕರಿಗೆ ಮತ್ತಷ್ಟು ರೋಮಾಂಚನ ನೀಡಲಿವೆ. ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ ಹಿಂದಿ ಬೆಲ್ಟ್ನಲ್ಲೂ ಭಾರಿ ಸದ್ದು ಮಾಡಿದ್ದ ಈ ಚಿತ್ರಕ್ಕೆ 3D ವರ್ಷನ್ ದೊಡ್ಡ ಮೈಲೇಜ್ ನೀಡುವ ನಿರೀಕ್ಷೆಯಿದೆ.
ಈ ಚಿತ್ರದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ಕುಮಾರ್, ವಿನಯ್ ರಾಯ್, ಗೆಟಪ್ ಶ್ರೀನು ಮತ್ತು ವೆನ್ನೆಲ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪ್ರೈಮ್ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಶಾಂತ್ ವರ್ಮ ಸಿನಿಮಾಟಿಕ್ ಯುನಿವರ್ಸ್ (PVCU) ಅಡಿಯಲ್ಲಿ ಬಂದ ಮೊದಲ ಚಿತ್ರ ಇದಾಗಿದ್ದು, ಸದ್ಯ ಇದರ ಸೀಕ್ವೆಲ್ ‘ಜೈ ಹನುಮಾನ್’ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ.

