ಮಹಾರಾಷ್ಟ್ರದ ಪುಣೆಯ ವಸತಿ ಸಂಕೀರ್ಣವೊಂದರಲ್ಲಿ ಲಿಫ್ಟ್ ಬಳಿ ನಡೆದ ಸಣ್ಣ ವಿವಾದವೊಂದು ವಿಕೋಪಕ್ಕೆ ತಿರುಗಿ, ಯುವಕನೊಬ್ಬ ಮಹಿಳೆಯ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ಈ ಭೀಕರ ದೃಶ್ಯಗಳು ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೇ 15 ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿವರ ಹೀಗಿದೆ: ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಯುವಕನೊಬ್ಬ ಲಿಫ್ಟ್‌ನಿಂದ ಹೊರಗೆ ಬರುವಾಗ ಅಲ್ಲಿಯೇ ನಿಂತಿದ್ದ ಮಹಿಳೆಗೆ ಆಕಸ್ಮಿಕವಾಗಿ ಆತನ ಹೆಗಲು ತಾಗಿದೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ವಾಗ್ವಾದ ತಾರಕಕ್ಕೇರಿದಾಗ ಮಹಿಳೆ ಮೊದಲು ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆರಂಭದಲ್ಲಿ ಯುವಕ ಇದಕ್ಕೆ ಪ್ರತಿಕ್ರಿಯಿಸದಿದ್ದರೂ, ಇಬ್ಬರ ನಡುವೆ ಮತ್ತೆ ವಾದ ಮುಂದುವರಿದಿದೆ. ಈ ವೇಳೆ ಮಹಿಳೆ ಎರಡನೇ ಬಾರಿ ಆತನಿಗೆ ಹೊಡೆಯಲು ಯತ್ನಿಸಿದಾಗ ಆಕೆ ಕೈ ತಪ್ಪಿದೆ.
ಇದರಿಂದ ಆಕ್ರೋಶಗೊಂಡ ಯುವಕ ಮಹಿಳೆಯನ್ನು ಜೋರಾಗಿ ತಳ್ಳಿ, ಆಕೆಯ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಆತ, ಮಹಿಳೆಯ ಹೆಗಲನ್ನು ಹಿಡಿದು ಮೊಣಕಾಲಿನಿಂದ ಆಕೆಯ ಹೊಟ್ಟೆಗೆ ಒದ್ದಿದ್ದಾನೆ. ಯುವಕನ ಈ ಭೀಕರ ದಾಳಿಯಿಂದ ದಿಗ್ಭ್ರಮೆಗೊಂಡ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ನೆಲದ ಮೇಲೆ ಬಿದ್ದು ಆತಂಕದಿಂದ ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ಯುವಕನ ಕೋಪ ತಣ್ಣಗಾಗಿರಲಿಲ್ಲ.
ಬಕೆಟ್‌ನಿಂದ ತಲೆಗೆ ಹೊಡೆದ ಪಾಪಿ: ನೆಲಕ್ಕೆ ಬಿದ್ದಿದ್ದ ಮಹಿಳೆಯ ಕೈಯನ್ನು ಬಲವಂತವಾಗಿ ಎಳೆದ ಯುವಕ, ಹತ್ತಿರದಲ್ಲೇ ಇದ್ದ ಬಕೆಟ್ ಅನ್ನು ತಂದು ಆಕೆಯ ತಲೆಗೆ ಬಲವಾಗಿ ಜಗ್ಗಿದ್ದಾನೆ. ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಕೈಯೊಡ್ಡಿದರೂ ಬಿಡದ ಆತ, ಆಕೆಯ ಸೊಂಟಕ್ಕೆ ಒದ್ದು, ಕೂದಲನ್ನು ಹಿಡಿದು ಮನಬಂದಂತೆ ಎಳೆದಿದ್ದಾನೆ. ಸಣ್ಣದೊಂದು ಮಾತಿನ ಚಕಮಕಿ ಇಷ್ಟೊಂದು ಕ್ರೂರ ಹಲ್ಲೆಗೆ ಕಾರಣವಾಗಿರುವುದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ಸಂಚಲನ ಮೂಡಿಸಿದ್ದು, ನೆಟ್ಟಿಗರು ಯುವಕನ ಅಮಾನವೀಯ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೂ ಸಾರ್ವಜನಿಕರಲ್ಲಿ ತಾಳ್ಮೆ ಕಡಿಮೆಯಾಗುತ್ತಿರುವುದು ಮತ್ತು ಹೆಚ್ಚುತ್ತಿರುವ ಹಿಂಸಾಚಾರದ ಪ್ರವೃತ್ತಿ ತೀವ್ರ ಕಳವಳಕಾರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

