HomeEntertainmentಲಾಸ್ ಏಂಜಲೀಸ್ ನಿವಾಸದಲ್ಲಿ ಪ್ರಿಯಾಂಕಾ-ನಿಕ್ ಜೋನಸ್ ದಸರಾ ಸಂಭ್ರಮ: ಪೂಜೆಯಲ್ಲಿ ಗಮನ ಸೆಳೆದ ಮಗಳು ಮಾಲ್ತಿ...

ಲಾಸ್ ಏಂಜಲೀಸ್ ನಿವಾಸದಲ್ಲಿ ಪ್ರಿಯಾಂಕಾ-ನಿಕ್ ಜೋನಸ್ ದಸರಾ ಸಂಭ್ರಮ: ಪೂಜೆಯಲ್ಲಿ ಗಮನ ಸೆಳೆದ ಮಗಳು ಮಾಲ್ತಿ ಮೇರಿ

ವಿಶ್ವಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಖ್ಯಾತ ಗಾಯಕ ನಿಕ್ ಜೋನಸ್ ದಂಪತಿ ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ನಿವಾಸದಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಿದ್ದಾರೆ. ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳಿಗೆ ಒತ್ತು ನೀಡುವ ಈ ಜೋಡಿ, ಈ ಬಾರಿ ತಮ್ಮ ಮಗಳು ಮಾಲ್ತಿ ಮೇರಿ ಜತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದಿದೆ.

ನವರಾತ್ರಿ ಹಬ್ಬದ ವಿಶೇಷತೆಯಾದ ಕನ್ಯಾಪೂಜೆಯನ್ನು ದಂಪತಿ ತಮ್ಮ ಮನೆಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಬಿಳಿ ಬಣ್ಣದ ಉಡುಗೆಯ ಜತೆಗೆ ಜೈ ಮಾತಾ ದಿ ಎಂದು ಮುದ್ರಿಸಲಾದ ಕೆಂಪು ಬಣ್ಣದ ಚುನ್ನೂಿಯನ್ನು ಧರಿಸಿದ್ದ ಪುತ್ರಿ ಮಾಲ್ತಿ ಮೇರಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದಳು. ಸಂಪ್ರದಾಯದಂತೆ ಪೂಜೆಯ ವೇಳೆ ಮಗಳ ಪಾದ ತೊಳೆದು ಗೌರವಿಸಿದ ದಂಪತಿ, ಮನೆ ದೇವಸ್ಥಾನದ ಮುಂದೆ ಹೂವುಗಳಿಂದ ಅಲಂಕರಿಸಿದ ಜಾಗದಲ್ಲಿ ಕುಳಿತು ಪೂಜಾ ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಈ ಸುಂದರ ಕ್ಷಣಗಳ ಕೆಲ ಸುಂದರ ಚಿತ್ರಗಳನ್ನು ಪ್ರಿಯಾಂಕಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮಾಲ್ತಿ ಧರಿಸಿದ್ದ ಬಳೆಗಳು ಹಾಗೂ ಸಾಂಪ್ರದಾಯಿಕ ಉಡುಗೆ ಅಭಿಮಾನಿಗಳ ಮನಗೆದ್ದಿದೆ.

ಮಗಳು ಮಾಲ್ತಿಗೆ ಭಾರತೀಯ ಸಂಪ್ರದಾಯ ಹಾಗೂ ಆಧ್ಯಾತ್ಮಿಕತೆಯ ಪರಿಚಯ ಮಾಡಿಕೊಡುವುದು ಪ್ರಿಯಾಂಕಾ ಅವರಿಗೆ ಮೊದಲಿನಿಂದಲೂ ವಿಶೇಷ ಕಾಳಜಿಯಾಗಿದೆ. ಈ ಹಿಂದೆ ಆಗಸ್ಟ್ ತಿಂಗಳಲ್ಲಿ ದುರ್ಗಾ ಸಪ್ತಶತಿಯ ಮಂತ್ರವೊಂದನ್ನು ಮಗಳಿಗೆ ಹೇಳಿಕೊಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ಸಣ್ಣ ವಯಸ್ಸಿನಿಂದಲೇ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಮಗಳಿಗೆ ಧಾರೆ ಎರೆಯುತ್ತಿರುವ ದಂಪತಿಯ ಈ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ. 2022ರ ಜನವರಿಯಲ್ಲಿ ಸರೊಗಸಿ ಮೂಲಕ ಜನ್ಮ ಪಡೆದ ಮಾಲ್ತಿ, ಜನನದ ಆರಂಭಿಕ ದಿನಗಳಲ್ಲಿ ಸೃಷ್ಟಿಯಾದ ಆರೋಗ್ಯ ಸಮಸ್ಯೆಯಿಂದಾಗಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸುಮಾರು ನೂರು ದಿನಗಳಿಗೂ ಅಧಿಕ ಕಾಲ ಕಳೆಯಬೇಕಾಗಿ ಬಂದಿತ್ತು. ಆ ಕಠಿಣ ದಿನಗಳಲ್ಲಿ ಮಗಳಿಗೆ ಧೈರ್ಯ ತುಂಬಲು ಮಂತ್ರಗಳನ್ನು ಪಠಿಸುತ್ತಿದ್ದೆವು ಎಂದು ಪ್ರಿಯಾಂಕಾ ಈ ಹಿಂದೆ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular