ಬಳ್ಳಾರಿ: ಬಳ್ಳಾರಿ ಚಲೋ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿರುವ ಮಾಜಿ ಸಚಿವ ಬಿ.ನಾಗೇಂದ್ರ, ಅವರಿಗೆ ಕೊಬ್ಬು ಜಾಸ್ತಿಯಾಗಿತ್ತು. ಕೊಲೆಸ್ಟ್ರಾಲ್ ಕರಗಿಸಲು ಬಳ್ಳಾರಿ ಪಾದಯಾತ್ರೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾಅರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ, ಜೆಪಿಯವರಿಗೆ ರಾಯಚೂರು-ಬಳ್ಳಾರಿ ಪಾದಯಾತ್ರೆ ನಡೆಸಲು ಯಾವುದೇ ವಿಷಯವಿರಲಿಲ್ಲ. ಕೊಲೆಸ್ಟ್ರಾಲ್, ಫ್ಯಾಟ್ ಕರಗಿಸಲು ಮಾಡಿದ ಯಾತ್ರೆಯಾಗಿದೆ. ಮನೆಯಲ್ಲಿ ಬಿಜೆಪಿ ನಾಯಕರಿಗೆ ನಡೆಯಲು ಸಮಯವಿರಲಿಲ್ಲ. ಪಾದಯಾತ್ರೆ ಮಾಡಿ ಒಬ್ಬರು 5 ಕೆಜಿ ಕರಗಿದ್ದಾರೆ ಎಂದರು.
ಇದೇ ವೇಳೆ ಬಳ್ಳಾರಿಯಲ್ಲಿ 10 ಕ್ಷೇತ್ರ ಗೆಲ್ಲುವ ಬಿಜೆಪಿಯ ಸವಾಲನ್ನು ಸ್ವೀಕರಿಸಿದ ನಾಗೇಂದ್ರ, ಅಖಂಡ ಬಳ್ಳಾರಿಯಲ್ಲಿ 10 ಸ್ಥಾನ ಗೆಲ್ಲುತ್ತೇವೆಂಬ ಬಿಜೆಪಿ ಹಾಕಿರುವ ಸವಾಲನ್ನು ನಾವು ಸ್ವೀಕಿಸುತ್ತೇವೆ ಎಂದರು. ಶೀಘ್ರದಲ್ಲೇ ಕಾಂಗ್ರೆಸ್ ಸಾಧನಾ ಸಮಾವೇಶ ಆಯೋಜಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ನಿಂದಲೂ ಶ್ರೀಘ್ರವಾಗಿ ಸಮಾವೇಶ ಮಾಡುವ ಬಗ್ಗೆ ಕಾಂಗ್ರೆಸ್ ನಾಯಕರು, ಹೈಕಮಾಂಡ್ ನಲ್ಲಿ ಚರ್ಚೆ ನಡೆದಿದೆ. ನಮ್ಮ ಸಾಧನೆಯನ್ನು ಜನರಿಗೆ ತಿಳಿಸಲು ಸಮಾವೇಶ ಮಾಡಲಾಗುವುದು. ಸಾವಿರಾರೂ ಕೋಟಿಯಲ್ಲಿ ಬಳ್ಳಾರಿ ಅಭಿವೃದ್ಧಿಯಾಗಿದೆ. ಇದು ಬಿಜೆಪಿ ಪಾದಯಾತ್ರೆ ಕೌಂಟರ್ ಸಮಾವೇಶ ಅಲ್ಲ. ಸಿಎಂ ಸೂಚನೆ ಮೇರೆಗೆ ಬಳ್ಳಾರಿಯಲ್ಲಿ ಸಮಾವೇಶ ನಡೆಸಲಾಗುವುದು. ಎಲ್ಲರೂ ಕೆಲಸದಲ್ಲಿ ಇದ್ದಾರೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರದಂತೆ ಎಲ್ಲರೊಂದಿಗೆ ಸಮಾವೇಶದ ಬಗ್ಗೆ ಚರ್ಚೆ ಮಾಡಿದ ಬಳಿಕ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಬಿಜೆಪಿಗೆ ಹೆದರಿ ನಾನು ರಾಜೀನಾಮೆ ನೀಡಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಾಜೀನಾಮೆ ನೀಡಿದೆ. ಬಿಜೆಪಿಯಲ್ಲಿನ ಕೆಟ್ಟತನ ತೊಳೆದು ಹಾಕಲು ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿಯವರ ಆರೋಗ್ಯಾಯುಷ್ಯ ಚೆನ್ನಾಗಿರಲಿ ಎಂದರು.
2028ಕ್ಕೆ ಬಿಜೆಪಿ ಬಲಿಷ್ಠವಾಗಿ ಬರಲಿ ಅದರ ಡಬಲ್ ನಾವು ಎದುರಿಸುತ್ತೇವೆ. ಬಿಜೆಪಿ ಸವಾಲ್ ಎದುರಿಸಲು ಸರ್ವ ಸನ್ನದ್ಧನಾಗಿದ್ದೇನೆ. ಅಖಂಡ ಬಳ್ಳಾರಿಯಲ್ಲಿ ಬಿಜೆಪಿ 10ಸ್ಥಾನ ಗೆಲ್ಲುತ್ತೇವೆ ಅಂತ ಸವಾಲ್ ಹಾಕಿದ್ದಾರೆ. ಅವರ ಸವಾಲ್ ಸ್ವೀಕಾರ ಮಾಡುತ್ತೇವೆ. ಅಖಂಡ ಬಳ್ಳಾರಿ ಮಾತ್ರ ಅಲ್ಲ ಇಡೀ ಕರ್ನಾಟದಲ್ಲಿ ನಮ್ಮ ಗೆಲುವು ಸಾಧಿಸುವುಸು ಖಚಿತ ಎಂದರು.
ಇನ್ನು ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತ ದಾಳಿ. ಕೇಂದ್ರದ ಬಿಜೆಪಿ ಸರ್ಕಾರವು ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದರು.
ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಹಿರಿಯ ಶಾಸಕ, ಮಂತ್ರಿಗಳು. ಮುಂದಿನ ದಿನ ಉನ್ನತ ಸ್ಥಾನದ ಆಕಾಂಕ್ಷಿ ಯಾಗಿದ್ದಾರೆ. ಅದಕ್ಕೆ ಇಡಿ ದಾಳಿ ಮಾಡಿದ್ದಾರೆ. ಜನ ಸಾಮಾನ್ಯರು ಇದು ರಾಜಕೀಯದ ದಾಳಿ ಅಂತ ಹೇಳಿದ್ದಾರೆ. ದಾಳಿಗೆ ರಾಜ್ಯದಲ್ಲಿರುವ ಬಿಜೆಪಿ ನಾಯಕರ ಕೈವಾಡ ಅಂತ ಗ್ರಾಮದ ಜನ ಹೇಳುವ ವಾತಾವರಣ ನಿರ್ಮಾಣವಾಗಿದೆ. ಇಡಿ, ಸಿಬಿಐ ಮೇಲೆ ಬಹಳ ಗೌರವವಿತ್ತು. ಆದರೆ ಈಗ ರಾಜಕೀಯ ಪ್ರೇರಿತ ದಾಳಿ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್‌ಗೆ , ಡಿ.ಕೆ.ಶಿವಕುಮಾರ್ ಅವರಿಗೆ ಯಾರು ಬಲ ತುಂಬ್ತಾರೋ ಅವರ ಮೇಲೆ ಇಡಿ ದಾಳಿ ಮಾಡಿಸುತ್ತಾರೆ. ನನ್ನ ಮೇಲೆ ದಾಳಿ ಆಗಿರೋದನ್ನು ನಮ್ಮ ನಾಯಕರು ಹೇಳುತ್ತಾರೆ. ಇನ್ನೂ ಹೆಚ್ಚಿನ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಆಗುತ್ತೆ. ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳ್ಳಿ ಪರವಾಗಿದೆ ಎಂದು ಹೇಳಿದರು.

