ಬೆಂಗಳೂರು: ಇಂದಿನಿಂದ ಮೂರು ದಿನಗಳಕಾಲ ವಿಧಾನಮಂಡಲ ವಿಶೇಷ ಅಧಿವೇಶನ ಆರಂಭವಾಗಿದ್ದು, ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ವಂದೇ ಮಾತರಂ ಗೀತೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಗದ್ದಲ ನಡೆಯಿತು.
ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದು, ಕಲಾಪದ ಆರಂಭದಲ್ಲೇ ಉಭಯ ನಾಯಕರ ನಡುವೆ ಸದನದಲ್ಲಿ ವಾಕ್ಸಮರ ಹಾಗೂ ಕೋಲಾಹಲ ಉಂಟಾಯಿತು. ಸಭಾಪತಿ ಸಲಿಂ ಅಹ್ಮದ್ ವಿಪಕ್ಷ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ವಿಪಕ್ಷ ಸದಸ್ಯರು ಮಾತುಗಳನ್ನು ಕೇಳಿಸಿಕೊಳ್ಳಲಿಲ್ಲ. ಪೂರ್ತಿ ಹಾಡು ಹಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.
ವಿಪಕ್ಷ ಸದಸ್ಯುಅರ ಗದ್ದಲದ ನಡುವೆಯೇ ಪರಿಷತ್ ಕಲಾಪ ಆರಂಭವಾಯಿತು. ಈ ವೇಳೆ ವಿಧಾನಪರಿಷತ್‌ನಲ್ಲಿ 2 ಚರಣಗಳ ವಂದೇ ಮಾತರಂ ಗಾಯನ ಹಾಡಲಾಯಿತು. ಎರಡು ಚರಣ ಹಾಡು ಮುಗಿದರೂ ಬಿಜೆಪಿ ಸದಸ್ಯರು ಸಂಪೂರ್ಣ ಗೀತೆ ಹಾಡುವುದನ್ನು ಮುಂದುವರಿಸಿದರು. ಈ ಗದ್ದಲದ ನಡುವೆಯೇ ಸಭಾಪತಿಯವರು ತಕ್ಷಣವೇ ಸಂವಿಧಾನ ಪೀಠಿಕೆ ಬೋಧನೆ ಆರಂಭಿಸಿದ್ದು, ಕಾಂಗ್ರೆಸ್ ಸದಸ್ಯರು ಪೀಠಿಕೆ ಓದಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ವಂದೇ ಮಾತರಂ ಪೂರ್ಣವಾಗಿ ಹಾಡದ ಸರ್ಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸಂವಿಧಾನ ಪೀಠಿಕೆ ಓದದ ಬಿಜೆಪಿ ನಾಯಕರಿಗೆ ಧಿಕ್ಕಾರ ಎಂದು ಸಭಾನಾಯಕ ಯತೀಂದ್ರ ಪ್ರತಿಘೋಷಣೆ ಕೂಗಿದರು.
ಇದುವರೆಗೂ ಪೂರ್ಣವಾಗಿ ಹಾಡಲಾಗುತ್ತಿದ್ದ ವಂದೇ ಮಾತರಂ ಗೀತೆಯನ್ನು ಈಗೇಕೆ ಎರಡು ಪ್ಯಾರಾಗಳಿಗೆ ಮುಕ್ತಾಯಗೊಳಿಸಿದ್ರಿ? ಎಂದು ಬಿಜೆಪಿ ಸದಸ್ಯರು ಸರ್ಕಾರವನ್ನು ಪ್ರಶ್ನಿಸಿ ತೀವ್ರ ಆಕ್ರೋಶ ಹೊರಹಾಕಿದರು.
ಗದ್ದಲ-ಕೋಲಾಹಲದ ನಡುವೆಯೇ ಪರಿಷತ್ ನಲ್ಲಿ ಕಲಾಪ ಆರಂಭವಾಗಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆಗೆ ಸರ್ಕಾರ ಮುಂದಾಗಿದೆ.

